ಮಂಗಳೂರು: ಮುಲ್ಕಿ ತಾಲೂಕಿನ ಅಂಗಾರಗುಡ್ಡೆ ಗ್ರಾಮದಲ್ಲಿ ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಕೋಣದ ಮಾಲಕರನ್ನು ಗುರಿಯಾಗಿಸಿಕೊಂಡು ಹಣಕ್ಕಾಗಿ ಪೀಡಿಸಿ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಂಗಾರಗುಡ್ಡೆ ಕೆಂಚನಕೆರೆ ನಿವಾಸಿ ಶಂಸುದ್ದೀನ್ ಎಂಬವರು ಕೋಣದ ಮಾಲೀಕ. ಶಂಸುದ್ದೀನ್ ಅವರು ಮುಂಬೈನಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ, ಜಾಗ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಮುಲ್ಕಿಯಲ್ಲಿ ನಡೆದ ಅರಸು ಕಂಬಳ ಸ್ಪರ್ಧೆಯಲ್ಲಿ ಶಂಸುದ್ದೀನ್ ತಂದಿದ್ದ ಕೋಣಗಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಗೆದ್ದಿದ್ದವು. ಈ ಬಹುಮಾನದಲ್ಲಿ ಬಂಗಾರದ ಸರ ಮತ್ತು ನಗದು ಸೇರಿತ್ತು.
ಈ ವಿಚಾರ ತಿಳಿದ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಎಂಬ ಮೂವರು ಆರೋಪಿಗಳು ಶಂಸುದ್ದೀನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. “ನಿನಗೆ ಬಹುಮಾನ ಸಿಕ್ಕಿದೆ, ಹಣ ಮತ್ತು ಬಂಗಾರದ ಸರವನ್ನು ನಮಗೆ ಕೊಡಬೇಕು. ಇಲ್ಲದಿದ್ದರೆ ದನಗಳನ್ನು ಕಡಿಯಲು ಕೊಡುತ್ತೀಯಲ್ಲವಾ?” ಎಂದು ಬೆದರಿಕೆ ಹಾಕಿ ಹಫ್ತಾ ಕೇಳಿದ್ದಾರೆ.
ಘಟನೆ ನಡೆದ ದಿನ ಆರೋಪಿಗಳು ಶಂಸುದ್ದೀನ್ ಅವರ ಮನೆಗೆ ನುಗ್ಗಿದ್ದಾರೆ. ಮನೆ ಒಳಗೆ ಪ್ರವೇಶಿಸಿ ಹಣ ನೀಡುವಂತೆ ಒತ್ತಡ ಹೇರಿದ್ದು, ನಿರಾಕರಿಸಿದಾಗ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಶಬ್ದ ಮಾಡುತ್ತಿದ್ದರಿಂದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಶಂಸುದ್ದೀನ್ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆ ಕುರಿತು ಶಂಸುದ್ದೀನ್ ಅವರು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಮುಲ್ಕಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಸಾಕ್ಷ್ಯಾಧಾರಗಳು ಹಾಗೂ ಸ್ಥಳೀಯರ ಹೇಳಿಕೆಗಳನ್ನು ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆ ಪೂರ್ಣಗೊಳಿಸಿದ ನಂತರ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಹಣಕ್ಕಾಗಿ ಪೀಡನೆ, ಮನೆಗೆ ನುಗ್ಗಿ ಬೆದರಿಕೆ ಹಾಕಿದ ಆರೋಪ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





