ಮಂಡ್ಯ: ಸುತ್ತೂರು ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಸಾವಿರ ವರ್ಷಗಳ ಇತಿಹಾಸವಿರುವ ದೇಶದ ಶ್ರೇಷ್ಠ ಸಾಮಾಜಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ತಾಣವಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆಯೋಜಿಸಲಾಗಿದ್ದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿಯವರ 1066ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಠದ ಕುರಿತು ಮಾತನಾಡಿದ್ದಾರೆ.
ಆದಿಜಗದ್ಗುರುಗಳ ಜೀವನ ಒಂದು ಸ್ಫೂರ್ತಿ
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ವ್ಯಕ್ತಿತ್ವವನ್ನು ಸ್ಮರಿಸಿದ ರಾಜ್ಯಪಾಲರು, ಅವರು ಭಾರತೀಯ ಸಂತ ಪರಂಪರೆಯ ಪ್ರಕಾಶಮಾನವಾದ ಸ್ತಂಭವಾಗಿದ್ದರು. ಅವರ ಸಂಪೂರ್ಣ ಜೀವನವು ತ್ಯಾಗ, ಕರುಣೆ ಮತ್ತು ಜನಕಲ್ಯಾಣಕ್ಕಾಗಿ ಮೀಸಲಾಗಿತ್ತು. ಶಿವಯೋಗ ಸಂಪ್ರದಾಯದ ಮೂಲಕ ಆತ್ಮಸಾಕ್ಷಾತ್ಕಾರ ಮತ್ತು ಸೇವೆಯನ್ನು ಸಾಮಾಜಿಕ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿದರು. ಜಾತಿ ಮತ್ತು ವರ್ಗಗಳ ಸಂಕುಚಿತ ಬೇಲಿಗಳನ್ನು ಮೀರಿ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯವನ್ನು ಬಿತ್ತಿದ ಮಹಾನ್ ಚೇತನ ಅವರು ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸುತ್ತೂರು ಮಠದ ಸೇವೆ
ಸುತ್ತೂರು ಮಠದ ಇಂದಿನ ಶ್ರೇಷ್ಠ ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು, ಪ್ರಸ್ತುತ 24ನೇ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ನಾಯಕತ್ವವನ್ನು ಶ್ಲಾಘಿಸಿ ಮಾತನಾಡಿದ ಅವರು, ಪೂಜ್ಯ ಶ್ರೀಗಳು ಮಠದ ಖ್ಯಾತಿಯನ್ನು ವಿಶ್ವದಾದ್ಯಂತ ವಿಸ್ತರಿಸಿದ್ದಾರೆ. ಕೇವಲ ಧಾರ್ಮಿಕ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಶಿಕ್ಷಣವನ್ನು 350ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ ದೇಶ-ವಿದೇಶಗಳಲ್ಲಿ ಹರಡುತ್ತಿರುವುದು ನಿಜಕ್ಕೂ ಅತ್ಯುತ್ತಮ ಕಾರ್ಯವಾಗಿದೆ ಎಂದರು.
ಭಾರತೀಯ ಸಂಸ್ಕೃತಿಯ ಶಾಶ್ವತತೆಯ ಬಗ್ಗೆ ಮಾತನಾಡಿದ ಗೆಹ್ಲೋಟ್, ನಮ್ಮ ಸಂತರು ಮತ್ತು ಋಷಿಮುನಿಗಳು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯನ್ನು ರಕ್ಷಿಸಿದ್ದಾರೆ. ಸಾರ್ವತ್ರಿಕ ಸಹೋದರತ್ವ ಮತ್ತು ಶಾಂತಿಯೇ ನಮ್ಮ ಸಂಸ್ಕೃತಿಯ ಮೂಲ ಮಂತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳು ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ಭಾರತದತ್ತ ಮುಖ ಮಾಡಿವೆ ಎಂದು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಬಾಹ್ಯ ಪ್ರಗತಿಯ ಜೊತೆಗೆ ಆಂತರಿಕ ಶುದ್ಧತೆ ಮತ್ತು ಸಂಯಮ ಮುಖ್ಯ ಎಂದು ನೆನಪಿಸಿದ ಅವರು, ‘ಸರ್ವೇ ಭವಂತು ಸುಖಿನಃ’ ಎಂಬ ಮಂತ್ರದೊಂದಿಗೆ ಆದಿಜಗದ್ಗುರುಗಳಿಗೆ ಭಕ್ತಿಪೂರ್ವಕ ನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಮಠದ ಪೂಜ್ಯರು, ಗಣ್ಯರು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಜಯಂತ್ಯುತ್ಸವಕ್ಕೆ ಸಾಕ್ಷಿಯಾದರು.





