ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ತನ್ನ ಅಪೂರ್ವ ಶಿಲ್ಪಕಲೆ, ಅದ್ಭುತ ವಾಸ್ತುಶಿಲ್ಪ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದಾಗಿ “ದೇವಾಲಯಗಳ ಸ್ವರ್ಗ” ಎಂದೇ ಪ್ರಸಿದ್ಧಿಯಾಗಿದೆ. ಇದೀಗ ಈ ಗ್ರಾಮವು ಮತ್ತೊಂದು ಅಪರೂಪದ ಘಟನೆಯಿಂದಾಗಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಇದೀಗ ಉತ್ಖನನ ಕಾರ್ಯದ ವೇಳೆ, ನಿಜ ನಾಗರಹಾವು ಪತ್ತೆಯಾಗಿದೆ.
ಲಕ್ಕುಂಡಿಯ ವಾರ್ಡ್ ನಂಬರ್ 4ರಲ್ಲಿ ವಾಸಿಸುವ ಗಂಗವ್ವ ಬಸವರಾಜ ರಿತ್ತಿ ಅವರ ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿತ್ತು. ಮನೆಯ 8ನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಮೊದಲು ತಾಮ್ರದ ಪಾತ್ರೆಯನ್ನು ಗಮನಿಸಿದನು. ಅದನ್ನು ತೆರೆದು ನೋಡಿದಾಗ ಅದರೊಳಗೆ ಚಿನ್ನದ ಹಾರಗಳು, ಬಳೆಗಳು, ಉಂಗುರಗಳು ಹಾಗೂ ಕಿವಿಯೋಲೆಗಳು ಪತ್ತೆಯಾಗಿದ್ದವು.
ಈ ಬೆಳವಣಿಗೆಯ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಹಾಗೂ ಪುರಾತತ್ವ ಇಲಾಖೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಳಿಕ ಜನವರಿ 16 ರಿಂದ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅಧಿಕೃತ ಉತ್ಖನನ ಕಾರ್ಯ ಆರಂಭಿಸಲಾಯಿತು. ಪುರಾತತ್ವ ತಜ್ಞರ ಮೇಲ್ವಿಚಾರಣೆಯಲ್ಲಿ, ವೈಜ್ಞಾನಿಕ ವಿಧಾನಗಳನ್ನು ಬಳಸಿ ನಿತ್ಯವೂ ಶೋಧ ಕಾರ್ಯ ಮುಂದುವರಿದಿದೆ. ಇದೀಗ 13ನೇ ದಿನದ ಉತ್ಖನನ ಕಾರ್ಯ ನಡೆಯುತ್ತಿದ್ದು, ಪ್ರತಿದಿನವೂ ಹೊಸ ಹೊಸ ಅಚ್ಚರಿಗಳು ಹೊರ ಬರುತ್ತಿವೆ.
ಇದಕ್ಕೂ ಮುನ್ನ ಮೂರು ಹೆಡೆಯಿರುವ ನಾಗರಹಾವಿನ ಶಿಲೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಅಪಾರ ಕುತೂಹಲ ಹುಟ್ಟಿಸಿತ್ತು. ಇದೀಗ ಅದರ ಬೆನ್ನಲ್ಲೇ, ನಿಜ ನಾಗರಹಾವು ಉತ್ಖನನ ಸ್ಥಳದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಹಾವು ಅಚಾನಕ್ ಕಾಣಿಸಿಕೊಂಡಾಗ ಕೆಲಸಗಾರರು ಮತ್ತು ಸ್ಥಳದಲ್ಲಿದ್ದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಿ, ಹಾವನ್ನು ಸುರಕ್ಷಿತವಾಗಿ ನಿಯಂತ್ರಿಸುವ ಕಾರ್ಯ ಕೈಗೊಳ್ಳಲಾಯಿತು. ಈ ಘಟನೆ ಬಳಿಕ, “ನಿಧಿಯನ್ನು ಕಾಪಾಡಲು ಸ್ವತಃ ನಾಗಪ್ಪನೇ ಬಂದಿದ್ದಾನೆ” ಎಂಬ ನಂಬಿಕೆ ಗ್ರಾಮದಲ್ಲಿ ಹರಡಿದೆ.
ಲಕ್ಕುಂಡಿ ಉತ್ಖನನದ ವೇಳೆ ಪುರಾತನ ವಸ್ತು, ಲೋಹದ ಗುಂಡು ಪತ್ತೆ!
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪಟ್ಟಣದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಪನನ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಿನ ಕುತೂಹಲ ಮತ್ತು ಸಂಚಲನ ಮೂಡಿಸುತ್ತಿದೆ. ಪ್ರಾಚೀನ ಕಾಲದ ವೈಭವಕ್ಕೆ ಸಾಕ್ಷಿಯಾಗಿರುವ ಈ ಪ್ರದೇಶದಲ್ಲಿ ಪ್ರತಿದಿನ ಅಮೂಲ್ಯ ಪುರಾತನ ವಸ್ತುಗಳು ಪತ್ತೆಯಾಗುತ್ತಿದೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಕಳೆದ ಎಂಟು ದಿನಗಳಿಂದ ಉತ್ಪನನ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ನಾಲ್ಕು ಬ್ಲಾಕ್‌ಗಳಂತೆ ಮಣ್ಣನ್ನು ತೆಗೆಯಲಾಗಿದ್ದು, ಈ ವೇಳೆ ಶಿವಲಿಂಗಗಳು, ನಾಗರಕಲ್ಲುಗಳು, ಶಿವಲಿಂಗದ ಪೀಠಗಳು, ವಿವಿಧ ವಿಗ್ರಹಗಳು, ದೇವಾಲಯದ ರಚನೆಯ ಕುರುಹುಗಳು ಸೇರಿದಂತೆ ಹಲವಾರು ಪುರಾತನ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ ನವಶಿಲಾಯುಗದ ಕಾಲಕ್ಕೆ ಸೇರಿದ್ದೆಂದು ಹೇಳಲಾಗಿರುವ ಕೈ ಕೊಡಲಿ, ಕೆಂಪು ಮಣಿ, ಟೆರ್ರಾಕೋಟಾದ ಬಿಲ್ಲೆಗಳು ಮತ್ತು ಪ್ರಾಚ್ಯ ಅವಶೇಷಗಳು ದೊರೆತಿವೆ.
ಉತ್ಪನದ 8ನೇ ದಿನವಾದ ಇಂದು, ಅತ್ಯಂತ ಕುತೂಹಲಕಾರಿ ಮತ್ತು ಅಮೂಲ್ಯವೆಂದು ಪರಿಗಣಿಸಲ್ಪಡುವ ಲೋಹದ ಗುಂಡು ಪತ್ತೆಯಾಗಿದ್ದು, ಸ್ಥಳೀಯರು ಮತ್ತು ಅಧಿಕಾರಿಗಳ ಗಮನ ಸೆಳೆದಿದೆ. ಸುಮಾರು ಅರ್ಧ ಕಿಲೋಗ್ರಾಂ ತೂಕವಿರುವ ಈ ಲೋಹದ ಗುಂಡು ಯಾವ ಕಾಲಘಟ್ಟಕ್ಕೆ ಸೇರಿದೆ? ಎಂಬ ಪ್ರಶ್ನೆಗಳು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಈ ಲೋಹದ ಗುಂಡು ಯುದ್ಧೋಪಕರಣವಾಗಿರಬಹುದೇ ಅಥವಾ ಯಾವುದಾದರೂ ವಿಶೇಷ ವಿಧಿವಿಧಾನಗಳಲ್ಲಿ ಬಳಸುತ್ತಿದ್ದ ವಸ್ತುವಾಗಿರಬಹುದೇ ಎಂಬ ಕುರಿತು ಪುರಾತತ್ವ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ವಸ್ತುವನ್ನು ವಶಕ್ಕೆ ಪಡೆದು ಸಂರಕ್ಷಣೆಗಾಗಿ ಕ್ರಮ ಕೈಗೊಂಡಿದ್ದು, ವಿಜ್ಞಾನಾಧಾರಿತ ಪರೀಕ್ಷೆಗಳಿಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದೆ. ಪರೀಕ್ಷೆಯ ನಂತರ ಈ ವಸ್ತುವಿನ ಕಾಲಮಾನ, ಇತಿಹಾಸ ಮತ್ತು ಉಪಯೋಗದ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಕುಂಡಿಯ ವೀರಭದ್ರೇಶ್ವರ ದೇವಾಲಯದ ಸುತ್ತಮುತ್ತ ಇನ್ನೂ ಕೆಲವೇ ಅಡಿ ಮಣ್ಣನ್ನು ತೆಗೆಯಬೇಕಿದ್ದು, ಅಲ್ಲಿ ಇನ್ನಷ್ಟು ಪುರಾತನ ಮತ್ತು ರಾಜ-ಮಹಾರಾಜರ ಕಾಲದ ಅಮೂಲ್ಯ ವಸ್ತುಗಳು ದೊರೆಯುವ ನಿರೀಕ್ಷೆ ಹೆಚ್ಚಿದೆ..
ಇನ್ನೊಂದೆಡೆ, ಲಕ್ಕುಂಡಿಯಲ್ಲಿ ನಡೆಯುತ್ತಿರುವ ಈ ಉತ್ಪನನ ಕಾರ್ಯ ಸ್ಥಳೀಯರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರ ಗಮನವನ್ನೂ ಸೆಳೆದಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಇತಿಹಾಸ ಮತ್ತು ಪುರಾತತ್ವದ ಮೇಲೆ ಆಸಕ್ತಿ ಹೊಂದಿರುವ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಉತ್ಪನನ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸುರಕ್ಷತೆ ಹಾಗೂ ಪುರಾತನ ವಸ್ತುಗಳ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚಿನ ನಿಗಾವಹಿಸಲು ಆಡಳಿತ ಕ್ರಮ ಕೈಗೊಂಡಿದೆ.





