ಕಾರವಾರ : ಶಿರಸಿಯಲ್ಲಿ ಶನಿವಾರ ನಡೆದ ಭೀಕರ ಘಟನೆ ರಾಜ್ಯದ ಗಮನಸೆಳೆದಿದೆ. KSRTC ಬಸ್‌ನೊಳಗೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಸಹ ಪ್ರಯಾಣಿಕನೊಬ್ಬನಿಗೆ ಚಾಕು ಇರಿದು ಆರೋಪಿ ಪರಾರಿಯಾದ ಘಟನೆ ನಡೆದಿದೆ.
ಘಟನೆಯ ವಿವರ
ಮೃತನನ್ನು ಸಾಗರ ನಿವಾಸಿ ಗಂಗಾಧರ್ ಎಂದು ಗುರುತಿಸಲಾಗಿದೆ. ಆರೋಪಿ ಪ್ರೀತಮ್ ಡಿಸೋಜಾ, ಶಿರಸಿಯ ದುಂಡಸಿ ನಗರ ನಿವಾಸಿ. ಗಂಗಾಧರ್ ಶಿರಸಿಯಲ್ಲಿನ ಪತ್ನಿಯ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಂದು ಪತ್ನಿ ಜೊತೆ ಬೆಂಗಳೂರಿಗೆ ಶಿರಸಿಯಿಂದ ಗಂಗಾಧರ್ ಹೊರಟಿದ್ದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪ್ರೀತಮ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಇವರಿಬ್ಬರ ಈ ಗಲಾಟೆ ತಾರಕಕ್ಕೇರಿದ್ದು, ಶಿರಸಿಯಿಂದ ಬೆಂಗಳೂರಿಗೆ ತೆರಳುವ ಬಸ್‌ನಲ್ಲಿ ಗಂಗಾಧರ್ ಪತ್ನಿಯ ಎದುರಲ್ಲೇ ಈ ಕ್ರೂರ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಗಂಗಾಧರ್ ಪತ್ನಿಯ ಹೇಳುವ ಪ್ರಕಾರ, ಹಾವೇರಿ-ಬೆಂಗಳೂರು ಬಸ್ ಹತ್ತಿ, ಹಳೆ ಬಸ್ ಸ್ಟ್ಯಾಂಡ್‌ನಲ್ಲಿ ಬಸ್ ಬದಲಾಯಿಸಲು ಇಳಿದ ಸಂದರ್ಭ ಪ್ರೀತಮ್ ದಾಳಿ ನಡೆಸಿದ್ದಾನೆ.
ಹತ್ಯೆಗೆ ಹಿಂದಿನ ಹಿನ್ನೆಲೆ:
ಪ್ರೀತಮ್ ಹಾಗೂ ಗಂಗಾಧರ್ ಪತ್ನಿ ಪೂಜಾ ಹತ್ತು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ನಂತರದಲ್ಲಿ ಪೂಜಾ, ಪ್ರೀತಮ್‌ನನ್ನು ತೊರೆದು, ಬೆಂಗಳೂರಿನಲ್ಲಿ ಗಂಗಾಧರ್ ಜತೆ ಮದುವೆಯಾಗಿದ್ದಳು. ಕೊನೆಗೂ ಈ ಪ್ರೇಮ ಗಂಗಾಧರ್ ಮರಣಕ್ಕೆ ಕಾರಣವಾಗಿದೆ.
ಪ್ರಕರಣದಲ್ಲಿ ಬಿಗ್ ಟ್ವಿಸ್ಟ್
ಪೂಜಾ ಪ್ರೀತಮ್ ಜೊತೆಗೆ ಹತ್ತು ವರ್ಷ ಪ್ರೀತಿ ಮಾಡಿದ್ದರು. ಆಕೆ ಪ್ರೀತಮ್‌ನನ್ನು ತೊರೆದು ಗಂಗಾಧರ್ ಜೊತೆಗೆ ಕಳೆದ 7-8 ತಿಂಗಳ ಹಿಂದೆ ಮದುವೆಯಾಗಿದ್ದಳು. ಹತ್ಯೆ ಆಗುವ ಹೊತ್ತಿಗೆ ಪ್ರೀತಮ್ ಬಸ್‌ಗೆ ಬಂದಿದ್ದು, ಪೂಜಾ ಕರೆಸಿಕೊಂಡಿದ್ದಳಾ ಎಂಬ ಅನುಮಾನ ಮೂಡಿಸಿದೆ.
ಪೂಜಾ ಮತ್ತು ಗಂಗಾಧರ್ ದಂಪತಿ ಹೊರಡುವ ವೇಳೆ ಪ್ರೀತಮ್ ಎಂಟ್ರಿಕೊಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹತ್ಯೆ ಪೂರ್ವಯೋಜಿತವೇ? ಎನ್ನುವ ಪ್ರಶ್ನೆ ಮೂಡಿದೆ. ಪೂಜಾ ಹಾಗೂ ಪ್ರೀತಮ್ ನಡುವೆ ಇನ್ನೂ ಸಂಬಂಧ ಇದೆಯಾ? ಗಂಗಾಧರ್ ಪತ್ನಿ ಪೂಜಾ ಹತ್ಯೆಗೂ ಮುನ್ನವೇ ಪ್ರೀತಮ್ ಜೊತೆ ಸಂಪರ್ಕದಲ್ಲಿದಳಾ? ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಈ ಎಲ್ಲಾ ಅನುಮಾನಗಳಿಗೆ ತನಿಖೆ ನಂತರ ಉತ್ತರ ಸಿಗಲಿದೆ. ಇನ್ನು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರೀತಮ್ ಪೊಲೀಸರಿಗೆ ಶರಣಾಗಿದ್ದಾನೆ. ತನಿಖೆ ಮುಂದುವರಿದಿದೆ.