ಮಡಿಕೇರಿ (ಜುಲೈ 8): ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನಲೆಯಲ್ಲಿ ಕಾವೇರಿ ತಟದ ಪ್ರಮುಖ ಜಲಾಶಯವಾದ ಕೆಆರ್‌ಎಸ್ (KRS) ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಡ್ಯಾಂನ ನೀರಿನ ಮಟ್ಟ 83 ಅಡಿಯನ್ನು ದಾಟಿದೆ. ಇದರಿಂದ ಕಾವೇರಿ ಕಣಿವೆಯ ರೈತರು ಹಾಗೂ ನೀರಿನ ಮೇಲೆ ಅವಲಂಬಿತ ಪ್ರದೇಶಗಳ ಜನರಲ್ಲಿ ಕೊಂಚ ಸಮಾಧಾನ ಮೂಡಿದೆ.
ಇಂದಿನ ಲೆಕ್ಕಾಚಾರ ಪ್ರಕಾರ, ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 83.64 ಅಡಿಗೆ ತಲುಪಿದೆ. ಜಲಾಶಯಕ್ಕೆ 7,531 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಹೊರಹರಿವು 790 ಕ್ಯೂಸೆಕ್ ಆಗಿದೆ. ಜಲಾಶಯದಲ್ಲಿ ಸದ್ಯ 12.485 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆಯ ಪರಿಣಾಮವಾಗಿ ಮುಂದಿನ ದಿನಗಳಲ್ಲೂ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಾರಂಗಿ, ಹೇಮಾವತಿ, ಕಬಿನಿ ಸೇರಿದಂತೆ ಕಾವೇರಿ ಕಣಿವೆಯ ವಿವಿಧ ಜಲಾಶಯಗಳ ಒಳಹರಿವು ಕೂಡ ಏರಿಕೆಯಾಗುತ್ತಿದೆ. ಅದರಲ್ಲೂ ಕೆಆರ್‌ಎಸ್ ಡ್ಯಾಂಗೆ ಉತ್ತಮ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದು ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ನೀರಿನ ಮೇಲೆ ಅವಲಂಬಿತ ಕೃಷಿ ಪ್ರದೇಶಗಳಿಗೆ ಹಿತಕರ ಬೆಳವಣಿಗೆಯಾಗಿದೆ.
ಕಳೆದ ಬೇಸಿಗೆಯಲ್ಲಿ ನೀರಿನ ಮಟ್ಟ ಕುಸಿತದಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಕುಡಿಯುವ ನೀರು, ಕೃಷಿ ನೀರಾವರಿ ಹಾಗೂ ಜಲಾಶಯದ ಭವಿಷ್ಯದ ಸಂಗ್ರಹದ ಬಗ್ಗೆ ಚಿಂತೆ ವ್ಯಕ್ತವಾಗಿತ್ತು. ಆದರೆ ಈಗ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ರೈತರಿಗೆ ಆಶಾಭಾವನೆ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಕೆಆರ್‌ಎಸ್ ಡ್ಯಾಂನಲ್ಲಿ ಸಂಗ್ರಹ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿರುವುದು ಕೇವಲ ರೈತರಿಗೆ ಮಾತ್ರವಲ್ಲ, ಕುಡಿಯುವ ನೀರಿನ ಅವಶ್ಯಕತೆ ಇರುವ ನಗರ ಪ್ರದೇಶಗಳಿಗೂ ಸಹ ಅನುಕೂಲಕರ ಬೆಳವಣಿಗೆಯಾಗಿದೆ. ಮೈಸೂರು, ಮಂಡ್ಯ ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ನೀರಿನ ಭದ್ರತೆ ದೃಷ್ಟಿಯಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ.
ಒಟ್ಟಾರೆ, ಕೊಡಗಿನಲ್ಲಿ ಚುರುಕುಗೊಂಡಿರುವ ಮುಂಗಾರು ಮಳೆ ಕೆಆರ್‌ಎಸ್ ಜಲಾಶಯಕ್ಕೆ ಹೊಸ ಚೈತನ್ಯ ತುಂಬಿದ್ದು, ನೀರಿನ ಮಟ್ಟದ ಏರಿಕೆಯಿಂದ ರೈತರು ಮತ್ತು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ.





