ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯಿಂದ ಸ್ಥಳೀಯರು ಮತ್ತು ಅಧಿಕಾರಿಗಳು ದಿಗ್ಭ್ರಾಂತರಾಗಿದ್ದಾರೆ. ಪತ್ನಿ ಕಾಣೆಯಾಗಿದ್ದಕ್ಕೆ ಮನನೊಂದ ತಂದೆ ತನ್ನ ಐದು ವರ್ಷದ ಮಗಳನ್ನು ಕೊಂದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯಲ್ಲಿ ಮರಣ ಹೊಂದಿದವರು ಮುಡಿಯನೂರು ಗ್ರಾಮದ ಲೋಕೇಶ್ (37) ಮತ್ತು ಅವರ ಮಗಳು ನಿಹಾರಿಕಾ (5). ಲೋಕೇಶ್ ಅವರು ತಮ್ಮ ಮಗಳ ನಿಹಾರಿಕಾಳನ್ನು ಉಸಿರು ಗಟ್ಟಿಸಿ ಕೊಂದಿರುವ ಶಂಕೆ ಇದೆ. ಮಗಳ ದೇಹವನ್ನು ಕಾರಿನಲ್ಲಿಟ್ಟು, ಬಳಿಕ ಅದೇ ಸ್ಥಳದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಡಿಯನೂರು ಸಮೀಪದ ಪಿ.ಯು ಕಾಲೇಜು ಎದುರು ನಡೆಯಿದೆ.
ಸ್ಥಳೀಯರು ಮೃತ ದೇಹಗಳನ್ನು ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಲಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ವಿವರಗಳ ಪ್ರಕಾರ, ಲೋಕೇಶ್ ಅವರ ಪತ್ನಿ ನವ್ಯಶ್ರಿ ಕೆಲವು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು. ಪತ್ನಿ ಕಾಣೆಯಾಗಿದ್ದಕ್ಕೆ ಮನನೊಂದ ಲೋಕೇಶ್ ಮಾನಸಿಕವಾಗಿ ನೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ ಪರೀಕ್ಷೆಗಾಗಿ ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವೈದ್ಯೆಯನ್ನು ಕೊಂದು ಚಿನ್ನ ದೋಚಿದ ದಂಪತಿ ಬಂಧನ !
ಬೆಂಗಳೂರು: ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಒಬ್ಬ ವೈದ್ಯೆಯನ್ನು ಕೊಂದು ಅವರ ಚಿನ್ನಾಭರಣಗಳನ್ನು ದೋಚಿದ ಆರೋಪಿಯಾಗಿ ಬಾಡಿಗೆದಾರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಮಹಾರಾಷ್ಟ್ರ ಮೂಲದ ಪ್ರಸಾದ್ ಶ್ರೀಶೈಲ (26) ಮತ್ತು ಅವರ ಪತ್ನಿ ಸಾಕ್ಷಿ (23) ಅವರನ್ನುಅರೆಸ್ಟ್ ಮಾಡಿದ್ದಾರೆ.
ಹತ್ಯೆಗೀಡಾದವರು ಉತ್ತರಹಳ್ಳಿಯ ನಿವಾಸಿ ವೈದ್ಯೆ ಶ್ರೀಲಕ್ಷ್ಮಿ (55) ಅವರು. ಆರೋಪಿ ದಂಪತಿ ಕಳೆದ ಆರು ತಿಂಗಳಿಂದ ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು. ಪ್ರಸಾದ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರೆ, ಸಾಕ್ಷಿ ಒಂದು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಘಟನೆಯ ನಂತರವೂ ಪ್ರಸಾದ್ ಮತ್ತು ಸಾಕ್ಷಿ ಮನೆಯಲ್ಲೇ ಉಳಿದು, ತಮಗೆ ಏನೂ ಗೊತ್ತಿಲ್ಲ ಎಂಬಂತೆ ನಟಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ನನಗೆ ಏನು ಗೊತ್ತಿಲ್ಲ ಎಂದು ಹೇಳಿದ್ದರು ಆದರೆ, ವಿಚಾರಣೆಯ ಸಮಯದಲ್ಲಿ ಆರೋಪಿಗಳು ಸಂಶಯಾಸ್ಪದವಾಗಿ ವರ್ತಿಸಿದ್ದಾರೆ.
ದೀರ್ಘ ವಿಚಾರಣೆ ಮತ್ತು ಪೊಲೀಸರ ತನಿಖೆಯಿಂದ ಆರೋಪಿ ದಂಪತಿ ತಾವೇ ಶ್ರೀಲಕ್ಷ್ಮಿ ಅವರನ್ನು ಕೊಂದು ಅವರ ಚಿನ್ನದ ಆಭರಣಗಳನ್ನು ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ದೋಚಿದ ಚಿನ್ನಾಭರಣಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿದ್ದಾರೆ.ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿ ದಂಪತಿಯನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು.





