ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆಗಾರರು ಈ ಬಾರಿ ಹವಾಮಾನ ವೈಪರೀತ್ಯದ ಪರಿಣಾಮದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿಯಬೇಕಿದ್ದರೂ, ಈ ಬಾರಿ ಹಲವು ಭಾಗಗಳಲ್ಲಿ ಒಣ ಹವೆ ಮುಂದುವರಿದಿದೆ. ಬಿಸಿಲಿನ ತೀವ್ರತೆಯಿಂದ ಕಾಳುಮೆಣಸಿನ ಬಳ್ಳಿಗಳಲ್ಲಿ ಕಾಯಿ ಕಟ್ಟುವ ತೆನೆಗಳು ಉದುರುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ವರ್ಷಗಳಲ್ಲಿ ಭಾರಿ ಮಳೆ, ಸೊರಗು ರೋಗ ಸೇರಿದಂತೆ ವಿವಿಧ ಕಾರಣಗಳಿಂದ ಸಾಕಷ್ಟು ಕಾಳುಮೆಣಸಿನ ಬಳ್ಳಿಗಳು ಹಾನಿಗೊಳಗಾಗಿದ್ದವು. ಈ ವರ್ಷ ಮುಂಗಾರು ಆರಂಭದಿಂದಲೇ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕಾಯಿ ಕಟ್ಟುವ ಪ್ರಕ್ರಿಯೆ ವಿಳಂಬವಾಗಿದೆ. ಇದೀಗ ಜುಲೈ ತಿಂಗಳಲ್ಲಿಯೂ ಒಣ ಹವೆ ಮುಂದುವರಿದಿರುವುದರಿಂದ ಫಸಲಿನ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತಿದೆ.
ಕಾಫಿ ತೋಟಗಳಲ್ಲಿ ನೆರಳಿಗಾಗಿ ಬೆಳೆಸಿರುವ ಸಿಲ್ವರ್ ಮರಗಳು ಹಾಗೂ ಇತರೆ ಮರಗಳಿಗೆ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಿ ರೈತರು ಉಪ ಬೆಳೆಯಾಗಿ ಕಾಳುಮೆಣಸನ್ನು ಬೆಳೆಯುತ್ತಿದ್ದಾರೆ. ಕಾಫಿ ಬೆಲೆಯಲ್ಲಿ ಏರುಪೇರು ಉಂಟಾದ ಸಂದರ್ಭದಲ್ಲಿಯೂ ಕಾಳುಮೆಣಸಿನಿಂದ ದೊರೆಯುವ ಆದಾಯ ರೈತರಿಗೆ ಆರ್ಥಿಕ ನೆರವಾಗುತ್ತಿತ್ತು. ಆದರೆ, ಈ ಬಾರಿ ಹವಾಮಾನದ ಅಸ್ಥಿರತೆ ಮತ್ತು ರೋಗಬಾಧೆಯಿಂದ ಉತ್ಪಾದನೆ ಕುಸಿಯುವ ಭೀತಿ ಎದುರಾಗಿದೆ.
ಪ್ರಸ್ತುತ ಕಾಳುಮೆಣಸಿನ ದರ ಪ್ರತಿ ಕೆ.ಜಿಗೆ ₹600 ರಿಂದ ₹750ರವರೆಗೆ ತಲುಪಿದೆ. ಬೆಲೆ ಏರಿಕೆಯಿದ್ದರೂ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದ ಕಾಫಿ ತೋಟಗಳಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಗೌಡಳ್ಳಿ, ದೊಡ್ಡಮಳ್ತೆ, ನೇರುಗಳಲೆ, ನೀಡ್ತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಬಾರಿ ಇಳುವರಿ ಕಡಿಮೆಯಾಗುವ ಆತಂಕ ಇದೆ.
ಶಾಂತಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಕೊಳೆ ರೋಗದಿಂದ ಕಾಳುಮೆಣಸಿನ ಬಳ್ಳಿಗಳು ಹಾನಿಗೊಳಗಾಗಿವೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚದಿಂದ ಕೆಲ ರೈತರು ಬೆಳೆ ನಿರ್ವಹಣೆಯಲ್ಲಿಯೂ ನಿರ್ಲಕ್ಷ್ಯ ತೋರಿಸುತ್ತಿರುವುದು ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ.
ದೇಶದಲ್ಲಿ ವಾರ್ಷಿಕ ಸುಮಾರು 2.20 ಲಕ್ಷ ಟನ್ ಕಾಳುಮೆಣಸು ಉತ್ಪಾದನೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣವನ್ನು ರಫ್ತು ಮಾಡಲಾಗುತ್ತಿದೆ. ಆದರೆ, ಈ ಬಾರಿ ಉತ್ಪಾದನೆ ಕುಸಿಯುವ ಸಾಧ್ಯತೆಯಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಲು ಕೊಡಗಿನಲ್ಲಿ ಕಾಳುಮೆಣಸು ಸಂಸ್ಕರಣಾ ಘಟಕ ಸ್ಥಾಪಿಸುವ ಅಗತ್ಯವಿದೆ ಎಂದು ರೈತರು ಒತ್ತಾಯಿಸಿದ್ದಾರೆ. ಸ್ಥಳೀಯವಾಗಿ ಸಂಸ್ಕರಣೆ ಮತ್ತು ನೇರ ಮಾರಾಟ ವ್ಯವಸ್ಥೆ ದೊರೆತರೆ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ.
ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮೇ ಮತ್ತು ಜೂನ್ ತಿಂಗಳಲ್ಲಿ ಮಳೆಯ ಕೊರತೆಯಿಂದ ಕಾಯಿ ಕಟ್ಟುವಿಕೆ ತಡವಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣದ ಮೇಲೆ ಬೆಳೆ ಪರಿಸ್ಥಿತಿ ಅವಲಂಬಿತವಾಗಿದ್ದು, ರೈತರು ಬೆಳೆ ವಿಮೆ ಪಡೆಯುವಂತೆ ಸಲಹೆ ನೀಡಿದ್ದಾರೆ.





