ಕಾರವಾರ: ಹೊಸ ವರ್ಷದ ಸಂಭ್ರಮಕ್ಕಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಆದರೆ, ಸಂಭ್ರಮಾಚರಣೆಯ ನೆಪದಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಅತ್ಯಂತ ಕಠಿಣ ಆದೇಶಗಳನ್ನು ಹೊರಡಿಸಿದ್ದಾರೆ.
ಸಮುದ್ರ ಕಿನಾರೆಗೆ 6 ಗಂಟೆ ಡೆಡ್‌ಲೈನ್
ಡಿಸೆಂಬರ್ 31ರಂದು ಸಂಜೆ 6 ಗಂಟೆಯ ನಂತರ ಯಾರೂ ಕೂಡ ಸಮುದ್ರದ ನೀರಿಗೆ ಇಳಿಯುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸಾಮಾನ್ಯವಾಗಿ ಪ್ರವಾಸಿಗರು ಮದ್ಯಪಾನ ಮಾಡಿ ಸಮುದ್ರಕ್ಕಿಳಿದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿ ನಡೆಯುವುದರಿಂದ ಈ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ, ಬೀಚ್‌ಗಳಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಮಾರಂಭ ಅಥವಾ ಪಾರ್ಟಿಗಳನ್ನು ಆಯೋಜಿಸಲು ಅನುಮತಿ ನೀಡದೇ, ನಿರಾಕರಿಸಲಾಗಿದೆ.
ರಾತ್ರಿ 12:30ಕ್ಕೆ ಬಂದ್ !
ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಪಬ್‌ಗಳಲ್ಲಿ ಪಾರ್ಟಿ ಮಾಡಲು ರಾತ್ರಿ 12:30ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ. ಆ ಸಮಯದ ನಂತರ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. 12:30ಕ್ಕೆ ಸಂಭ್ರಮ ಮುಗಿಸಿ ಎಲ್ಲರೂ ಮನೆಗಳಿಗೆ ಅಥವಾ ಉಳಿದುಕೊಂಡಿರುವ ಸ್ಥಳಗಳಿಗೆ ತೆರಳಬೇಕು. ಬಾರ್ ಮತ್ತು ಪಬ್‌ಗಳನ್ನು ನಿಗದಿತ ಸಮಯದ ನಂತರ ತೆರೆದಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಯಾವೆಲ್ಲಾ ಬೀಚ್‌ಗಳಲ್ಲಿ ಕಣ್ಗಾವಲು?
ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ಹೆಚ್ಚಿನ ಲೈಫ್ ಗಾರ್ಡ್ಸ್ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ:
-
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ
-
ಗೋಕರ್ಣದ ಓಂ ಬೀಚ್, ಕುಡ್ಲೆ ಮತ್ತು ಹಾಫ್ ಮೂನ್ ಬೀಚ್
-
ಮುರುಡೇಶ್ವರ ಕಡಲತೀರ
-
ಅಪ್ಸರಕೊಂಡ ಮತ್ತು ಇಕೋ ಬೀಚ್
ಇದಲ್ಲದೆ ಯಾಣ, ಬನವಾಸಿ ಮತ್ತು ಸಹಸ್ರಲಿಂಗದಂತಹ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರರನ್ನು ನಿಯೋಜಿಸಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಷೇಧ
ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಿ ಮದ್ಯಪಾನ ಮಾಡುವುದು ಅಥವಾ ಪಾರ್ಟಿ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸೇರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಪೊಲೀಸ್ ಇಲಾಖೆಗೆ ‘ಅಲರ್ಟ್’ ಸೂಚನೆ ನೀಡಲಾಗಿದೆ.
ಪ್ರವಾಸಿಗರು ಜಿಲ್ಲಾಡಳಿತದೊಂದಿಗೆ ಸಹಕರಿಸಿ, ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ





