ಬೆಂಗಳೂರು, ನವೆಂಬರ್ 23: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ ಬದಲಾವಣೆ ಕಾಣುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ ಇಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡು ಜಿಲ್ಲೆಗಳು ಮಾತ್ರ ಸಂಪೂರ್ಣ ಒಣ ಹವೆ ಇರಲಿವೆ.
ಕರಾವಳಿಯಲ್ಲಿ ಜೋರು ಮಳೆ
ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಈ ಮೂರು ಕರಾವಳಿ ಜಿಲ್ಲೆಗಳಲ್ಲಿ ಇಂದು ಉತ್ತಮ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು, ಪ್ರವಾಸಿಗರು ಹಾಗೂ ರೈತರು ಎಚ್ಚರಿಕೆಯಿಂದಿರಬೇಕು ಎಂದು ಇಲಾಖೆ ಸೂಚಿಸಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ
ದಕ್ಷಿಣ ಒಳನಾಡಿನ 12 ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಕೆಲವೆಡೆ ಗುಡುಗು-ಸಿಡಿಲಿನೊಂದಿಗೆ ಲಘು ಮಳೆಯಾಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳು ಸೇರಿವೆ. ಈ ಪ್ರದೇಶಗಳಲ್ಲಿ ರೈತರು ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿರುವುದರಿಂದ ಈ ಸಣ್ಣ ಮಳೆಯು ಬೆಳೆಗೆ ವರದಾನ ಆಗಲಿದೆ.
ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಒಣ ಹವೆ
ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇಂದು ಒಣ ಹವೆ ಮುಂದುವರಿಯಲಿದೆ. ಇದರಿಂದ ಈ ಭಾಗದ ರೈತರಲ್ಲಿ ನೀರಾವರಿ ಬೆಳೆಗಳಿಗೆ ಆತಂಕ ಶುರುವಾಗಿದೆ. ಜಲಾಶಯಗಳ ನೀರಿನ ಮಟ್ಟ ಈಗಾಗಲೇ ಕಡಿಮೆಯಾಗುತ್ತಿರುವುದು ಈ ಒಣ ಹವೆಯಿಂದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಿನ ಹವಮಾನ ವರದಿ
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಸಣ್ಣದಾಗಿ ಮಳೆ ಸುರಿಯುತ್ತಿದೆ. ಗರಿಷ್ಠ ತಾಪಮಾನ 27.4° ಸೆಲ್ಸಿಯಸ್ಗೆ ಇಳಿದಿದ್ದು, ಕನಿಷ್ಠ ತಾಪಮಾನ 18° ಸೆಲ್ಸಿಯಸ್ ಸುಮಾರಿಗೆ ಇರಲಿದೆ. ಈ ತಂಪು ಹವೆಯಿಂದ ಬೆಂಗಳೂರಿಗರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಅರಬ್ಬಿ ಸಮುದ್ರದಿಂದ ಆಗಮಿಸುತ್ತಿರುವ ತೇವಾಂಶಯುಕ್ತ ಗಾಳಿಯು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡಗಳನ್ನು ಉಂಟುಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಎರಡು ಭಾಗಗಳಲ್ಲಿ ಎರಡು ರೀತಿಯ ಹವಾಮಾನ ಕಾಣುತ್ತಿದೆ. ಇಂದು ಮಳೆಯಿರುವ ಪ್ರದೇಶಗಳಲ್ಲಿ ಗುಡುಗು-ಸಿಡಿಲು, ಆಲಿಕಲ್ಲು ಸಾಧ್ಯತೆ ಇದ್ದು, ಜನರು ಮನೆಯಿಂದ ಹೊರಗೆ ಬಂದಾಗ ಎಚ್ಚರಿಕೆಯಿಂದಿರಲಿ ಎಂದು ಹವಾಮಾನ ಇಲಾಖೆ ಕೋರಿದೆ. ಮುಂದಿನ 2-3 ದಿನಗಳಲ್ಲೂ ಇದೇ ರೀತಿಯ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ.





