ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಕಂಡಿದ್ದ ಮಳೆ ಕೊರತೆ ಕ್ರಮೇಣ ಕಡಿಮೆಯಾಗಿದೆ. ಜೂನ್ ಆರಂಭದಿಂದ ಜುಲೈ 23ರವರೆಗೆ ವಾಡಿಕೆಯ 388.3 ಮಿ.ಮೀ. ಮಳೆಯ ಬದಲು 425 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ.9ರಷ್ಟು ಹೆಚ್ಚಿನ ಮಳೆ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ 189 ಮಿ.ಮೀ. ವಾಡಿಕೆಗೆ ಬದಲಾಗಿ 234 ಮಿ.ಮೀ. (ಶೇ.24 ಹೆಚ್ಚು) ಮತ್ತು ದಕ್ಷಿಣ ಒಳನಾಡಿನಲ್ಲಿ 128 ಮಿ.ಮೀ. ವಾಡಿಕೆಗೆ ಬದಲಾಗಿ 217 ಮಿ.ಮೀ. (ಶೇ.4 ಕೊರತೆ) ಮಳೆಯಾಗಿದೆ. ಆದರೆ, ಹಿಂದಿನ ವಾರಗಳಿಗೆ ಹೋಲಿಕೆಯಲ್ಲಿ ಮಳೆ ಕೊರತೆ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್:
ಕರಾವಳಿಯ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜುಲೈ 27ರವರೆಗೆ ಭಾರೀ ಮಳೆಯ ಸಾಧ್ಯತೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ದಾವಣಗೆರೆ, ಮೈಸೂರು, ಮತ್ತು ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಮುಂಗಾರು ಮಾರುತಗಳು ಸಕ್ರಿಯವಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ.
ಭಾರೀ ಮಳೆಯಿಂದ ನಷ್ಟ:
ಕಳೆದ 24 ಗಂಟೆಗಳಲ್ಲಿ ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದರಿಂದ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ರಾಘವೇಂದ್ರ ಜೋಗಿ ಅವರ ಮನೆ ಸಂಪೂರ್ಣ ಕುಸಿದು, ಸುಮಾರು 10 ಲಕ್ಷ ರು. ನಷ್ಟವಾಗಿದೆ. ಗಂಗೊಳ್ಳಿ ಗ್ರಾಮದ ರೇಖಾ ಖಾರ್ವಿ (2.5 ಲಕ್ಷ ರು.), ಕಾಪು ತಾಲೂಕಿನ ಸೂರ್ಯಪ್ರಕಾಶ್ (1 ಲಕ್ಷ ರು.), ಮಹಮದ್ ಜುಬೇರ್ (15,000 ರು.), ಭಾರತಿ ಭುಜಂಗ ಶೆಟ್ಟಿ (25,000 ರು.), ನೀಲು ಮೊಗವೀರ (35,000 ರು.), ರಾಧಾ ಬಿ. ಚಂದನ್ (30,000 ರು.), ಮತ್ತು ಲಚ್ಚ (21,000 ರು.) ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ:
ಭಾರೀ ಮಳೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ (ಮಂಗಳೂರು, ಮೂಡಬಿದ್ರೆ, ಮುಲ್ಕಿ, ಬಂಟ್ವಾಳ, ಉಳ್ಳಾಲ) ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 25ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು, ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಮುಂಜಾಗ್ರತೆ ಕ್ರಮಗಳು
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಕರಾವಳಿಯಲ್ಲಿ ಗಂಟೆಗೆ 50 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮತ್ತು ಸಮುದ್ರ ತೀರ, ನದಿ ತಟ, ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ವಿಪತ್ತು ನಿರ್ವಹಣಾ ಸಮಿತಿಗಳು ಸನ್ನದ್ಧವಾಗಿರಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಒಂದು ವಾರ ರಾಜ್ಯದಾದ್ಯಂತ ಭಾರೀ ಮಳೆ ಮುಂದುವರಿಯಲಿದೆ.