ಕರ್ನಾಟಕದ ಜೈಲುಗಳಲ್ಲಿ ಕೈದಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಜೈಲು ಇಲಾಖೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಜೈಲುಗಳ ಒಳಗೆ ಮೊಬೈಲ್ ಫೋನ್‌ಗಳ ಪತ್ತೆ ಪ್ರಕರಣಗಳು ಮುಂದುವರಿದಿವೆ. ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್ ಫೋನ್‌ಗಳು ಪತ್ತೆಯಾಗಿರುವುದು ಜೈಲು ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜೈಲುಗಳ ಒಳಗೆ ಅಕ್ರಮವಾಗಿ ಮೊಬೈಲ್ ಫೋನ್‌ಗಳು ಪ್ರವೇಶಿಸುವುದನ್ನು ತಡೆಯಲು ಹಲವು ತಿಂಗಳಿಂದ ತಪಾಸಣೆ ಮತ್ತು ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಆದರೂ ಈ ಹಿಂದೆ ಜೈಲುಗಳ ಒಳಗೆ ಬಂದಿದ್ದ ಮೊಬೈಲ್‌ಗಳನ್ನು ಕೈದಿಗಳು ಬಳಸುತ್ತಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಮೊಬೈಲ್‌ಗಳು ಹಾಗೂ ಸಿಮ್‌ಕಾರ್ಡ್‌ಗಳು ಪತ್ತೆಯಾಗಿವೆ.
ಪರಪ್ಪನ ಅಗ್ರಹಾರದಲ್ಲೇ 334 ಮೊಬೈಲ್ ಸೀಜ್
ರಾಜ್ಯದ ಜೈಲುಗಳಲ್ಲಿ ಪತ್ತೆಯಾದ ಒಟ್ಟು 410 ಮೊಬೈಲ್‌ಗಳ ಪೈಕಿ 334 ಮೊಬೈಲ್‌ಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಪತ್ತೆಯಾಗಿವೆ. ರಾಜ್ಯದ ಪ್ರಮುಖ ಮತ್ತು ಅತಿ ಹೆಚ್ಚು ಭದ್ರತೆಯ ಜೈಲುಗಳಲ್ಲಿ ಒಂದಾಗಿರುವ ಪರಪ್ಪನ ಅಗ್ರಹಾರದಲ್ಲಿ ಇಷ್ಟೊಂದು ಸಂಖ್ಯೆಯ ಮೊಬೈಲ್‌ಗಳು ಸಿಕ್ಕಿರುವುದು ಗಮನ ಸೆಳೆದಿದೆ.
ಅಧಿಕಾರಿಗಳ ತಪಾಸಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇನ್ನೂ ಕೆಲ ಮೊಬೈಲ್‌ಗಳು ಜೈಲಿನೊಳಗೆ ಇರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಸದ್ಯ ಸುಮಾರು 6-7 ಮೊಬೈಲ್‌ಗಳು ಮಾತ್ರ ಜೈಲಿನೊಳಗೆ ಉಳಿದಿರುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚಿದ ಮೊಬೈಲ್ ಪತ್ತೆ
ಜೈಲುಗಳಲ್ಲಿ ಮೊಬೈಲ್ ಬಳಕೆಯ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ವೇಳೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್‌ಗಳು ಪತ್ತೆಯಾಗಿವೆ. ಲಭ್ಯ ಮಾಹಿತಿಯ ಪ್ರಕಾರ, 2023ರಲ್ಲಿ 72 ಮೊಬೈಲ್‌ಗಳು ಮತ್ತು 28 ಸಿಮ್‌ಕಾರ್ಡ್‌ಗಳು, 2024ರಲ್ಲಿ 104 ಮೊಬೈಲ್‌ಗಳು ಹಾಗೂ 10 ಸಿಮ್‌ಗಳು ಪತ್ತೆಯಾಗಿದ್ದವು.
2025ರಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, 148 ಮೊಬೈಲ್‌ಗಳು ಮತ್ತು 68 ಸಿಮ್‌ಕಾರ್ಡ್‌ಗಳು ಸಿಕ್ಕಿವೆ. 2026ರಲ್ಲಿ ಇದುವರೆಗೆ 410 ಮೊಬೈಲ್‌ಗಳು ಹಾಗೂ 228 ಸಿಮ್‌ಕಾರ್ಡ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆಯೂ ತನಿಖೆ
2025ರ ಏಪ್ರಿಲ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ಗೆ ಮೊಬೈಲ್ ಸಪ್ಲೈ ಆಗಿದ್ದ ಪ್ರಕರಣವೂ ಇದೀಗ ಚರ್ಚೆಗೆ ಬಂದಿದೆ. ಜೈಲಿನ ಆಂತರಿಕ ತನಿಖೆ ವೇಳೆ ಈ ವಿಚಾರ ಪತ್ತೆಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, 2025ರಲ್ಲಿ ಜೈಲಿನೊಳಗೆ ವಿಡಿಯೋ ಮಾಡಲಾಗಿತ್ತು ಎಂಬ ಬಗ್ಗೆಯೂ ಪ್ರಾಥಮಿಕ ಮಾಹಿತಿ ದೊರೆತಿದೆ ಎಂದು ತಿಳಿದುಬಂದಿದೆ.
ಜೈಲುಗಳಲ್ಲಿ ಮೊಬೈಲ್ ಬಳಕೆ ನಡೆಯದಂತೆ ತಡೆಯಲು ಅಧಿಕಾರಿಗಳು ತಪಾಸಣೆ, ಮೊಬೈಲ್ ಜಾಮರ್ ಸೇರಿದಂತೆ ಹಲವು ಭದ್ರತಾ ಕ್ರಮಗಳ ಮೇಲೆ ಗಮನಹರಿಸುತ್ತಿದ್ದಾರೆ. ಆದರೂ ಮೊಬೈಲ್‌ಗಳು ಜೈಲಿನೊಳಗೆ ಪತ್ತೆಯಾಗುತ್ತಿರುವುದರಿಂದ ಅಕ್ರಮವಾಗಿ ಫೋನ್ ಪ್ರವೇಶಿಸುವ ಮಾರ್ಗಗಳ ಕುರಿತು ಹೆಚ್ಚಿನ ತನಿಖೆ ನಡೆಸುವ ಅಗತ್ಯ ಎದುರಾಗಿದೆ.





