ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತೀವ್ರ ಕ್ರಮ ಕೈಗೊಂಡಿದ್ದಾರೆ. ಬೆಳ್ಳಂಬೆಳಗ್ಗೆಯೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಹಲವು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ. ಕೊಪ್ಪಳ, ಧಾರವಾಡ, ವಿಜಯನಗರ, ಬಳ್ಳಾರಿ, ಬೆಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಈ ದಾಳಿಗಳು ನಡೆದಿದೆ.
ಲೋಕಾಯುಕ್ತ ಪೊಲೀಸರು ಈ ದಾಳಿಗಳನ್ನು ಅಕ್ರಮ ಆಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ನಡೆಸಿದ್ದಾರೆ. ಬೆಳಗಿನ ಜಾವದಲ್ಲಿಯೇ ತಂಡಗಳು ಅಧಿಕಾರಿಗಳ ಮನೆಗಳಲ್ಲಿ ದಾಖಲೆಗಳ ಪರಿಶೀಲನೆಗೆ ಇಳಿದಿವೆ.
ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಹೆಚ್‌ಓ) ಕಚೇರಿ ಹಾಗೂ ಆಸ್ಪತ್ರೆ ಕಚೇರಿಗಳ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ತಂಡಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ್ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ಅವರ ಮನೆಯಲ್ಲಿ ತಂಡಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ರಾಜಶೇಖರ್ ಅವರು ಬೆಳಗಾವಿ ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ರಾಣಿ ಚೆನ್ನಮ್ಮ ನಗರದಲ್ಲಿರುವ ಅವರ ಖಾಸಗಿ ಕಚೇರಿ ಹಾಗೂ ಯರಿಕೊಪ್ಪ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ. ಕೃಷಿ ಇಲಾಖೆಯಲ್ಲಿ ರೈತರಿಗೆ ಸಂಬಂಧಿಸಿದ ಯೋಜನೆಗಳು, ಸಬ್ಸಿಡಿ ಹಾಗೂ ಇತರ ಸೌಲಭ್ಯಗಳಲ್ಲಿ ಅವ್ಯವಹಾರ ನಡೆದಿರಬಹುದು ಎಂಬ ಆರೋಪಗಳು ಇವೆ.
ಕೊಪ್ಪಳ, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಸಹ ಲೋಕಾಯುಕ್ತ ತಂಡಗಳು ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಕೆಲವು ಕಚೇರಿಗಳ ಮೇಲೆ ಗಮನ ಹರಿಯುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ನಿವಾರಣೆಗಾಗಿ ಲೋಕಾಯುಕ್ತ ದಾಳಿ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಫ್‌ಡಿಎ ಹಾಸನದ ಜ್ಯೋತಿ ಮೇರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಧೋಲಪ್ಪ (ಕಲಬುರ್ಗಿ) ಮತ್ತು ಚಂದ್ರಕುಮಾರ್ (ಚಿತ್ರದುರ್ಗ), ಉಡುಪಿ ಆರ್ ಟಿಓ ಲಕ್ಷ್ಮಿನಾರಾಯಣ ಪಿ. ನಾಯಕ್, ಬೆಂಗಳೂರು ವೈದ್ಯಾಧಿಕಾರಿ ಮಂಜುನಾಥ್. ಜಿ, ದಾವಣಗೆರೆ ಕೆಆರ್‌ಐಡಿಎಲ್ ಎಇಇ ಜಗದೀಶ್ ನಾಯಕ್, ಹಾವೇರಿ ಕಂದಾಯ ಅಧಿಕಾರಿ ಅಶೋಕ್ ಸೇರಿದಂತೆ ವಿವಿದ ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ಮೂಲಗಳ ಪ್ರಕಾರ, ರಾಜ್ಯದ ವಿವಿಧ ಇಲಾಖೆಗಳ ಮೇಲಿನ ಭ್ರಷ್ಟಾಚಾರ ನಿಯಂತ್ರಣ ಕ್ರಮದ ಭಾಗವಾಗಿದೆ. ಅಧಿಕಾರಿಗಳ ನಡುವೆ ಸಾರ್ವಜನಿಕ ಹಾಗೂ ಇಲಾಖಾ ಸಂಪತ್ತು ದುರುಪಯೋಗಕ್ಕೆ ಕಾರಣವಾಗುವಂತಹ ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ.





