ಬೆಂಗಳೂರು (ಏಪ್ರಿಲ್ 2): ರಾಜ್ಯದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಹಣ ಬಿಡುಗಡೆಯನ್ನು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ತಡೆಹಿಡಿಯಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು ವಾದ-ಪ್ರತಿವಾದಗಳನ್ನು ಆಲಿಸಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
ಯಾರು, ಏಕೆ ಅರ್ಜಿ?
ದಾವಣಗೆರೆ ನಿವಾಸಿ ಗೌತಮ್ ಕುಮಾರ್ ಜೈನ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರ ಯೋಜನೆಗಳ ಹಣ ಬಿಡುಗಡೆ ಮಾಡುವುದರಿಂದ ಮತದಾರರ ಮೇಲೆ ಪ್ರಭಾವ ಬೀರಲಾಗುತ್ತದೆ ಎಂದು aರ್ಜಿದಾರರು ಹೇಳಿದ್ದಾರೆ. ಆದ್ದರಿಂದ ಚುನಾವಣೆ ಮುಗಿಯುವವರೆಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಹಣ ಪಾವತಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಲಾಗಿತ್ತು.
ನ್ಯಾಯಾಲಯದಲ್ಲಿ ಏನು ವಾದ ನಡೆಯಿತು?
ಸರ್ಕಾರದ ಪರ ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿಕಿರಣ್ ಶೆಟ್ಟಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಇದೊಂದು ಕ್ಷುಲ್ಲಕ ಅರ್ಜಿ. ಇಂತಹ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸಬಾರದು. ಅರ್ಜಿದಾರರು ಸುಳ್ಳು ಮಾಹಿತಿ ನೀಡಿದ್ದಾರೆ. ಅನ್ನಭಾಗ್ಯ, ಯುವನಿಧಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಸರ್ಕಾರ ನಿಯಮಿತವಾಗಿ ಜಾರಿಗೊಳಿಸುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿದೆ. ಅಸತ್ಯದ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ವಜಾಗೊಳಿಸಬೇಕು ಮತ್ತು ಅರ್ಜಿದಾರರಿಗೆ ದಂಡ ವಿಧಿಸಬೇಕು” ಎಂದರು.
ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಪ್ರತಿವಾದಿಸಿ, “ಅನ್ನಭಾಗ್ಯ ಯೋಜನೆಯನ್ನು ಕಳೆದ ಆರು ತಿಂಗಳಿಂದ ಜಾರಿಗೊಳಿಸಿಲ್ಲ. ಯುವನಿಧಿ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ನೀತಿ ಸಂಹಿತೆಯ ನಂತರವೂ ಚುನಾವಣಾ ಆಯೋಗದ ಅನುಮತಿ ಪಡೆಯದೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಉಚಿತ ಕೊಡುಗೆಗಳು ದೇಶದ ಬೆಳವಣಿಗೆಗೆ ಮಾರಕ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ” ಎಂದರು.
ನ್ಯಾಯಾಲಯದ ಪ್ರಶ್ನೆ ಮತ್ತು ಅಂತಿಮ ಆದೇಶ
“ಅನ್ನಭಾಗ್ಯವನ್ನು ಯಾವಾಗ ಜಾರಿಗೊಳಿಸಲಾಗಿದೆ?” ಎಂದು ನ್ಯಾಯಾಲಯ ಪ್ರಶ್ನಿಸಿತು. “ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಾರಿಯಲ್ಲಿದೆ. ಕೆಲವು ತಿಂಗಳುಗಳಲ್ಲಿ ತಾಂತ್ರಿಕ ವ್ಯತ್ಯಾಸಗಳಾಗಿರಬಹುದು” ಎಂದು ಎಜಿ ಉತ್ತರಿಸಿದರು.
ಇನ್ನು ರಾಜಕೀಯವನ್ನು ನ್ಯಾಯಾಲಯದ ಹೊರಗೆ ಮಾಡಬೇಕು, ಒಳಗಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ ಎಂದು ಅರುಣ್ ಶ್ಯಾಮ್ ನೆನಪಿಸಿದರು.
ವಾದಗಳನ್ನು ಆಲಿಸಿದ ನ್ಯಾಯಾಲಯವು, “ಸರ್ಕಾರ ಅಧಿಕಾರದಲ್ಲಿದೆ. ಅವರು ನೀತಿಗಳನ್ನು ರೂಪಿಸಿದ್ದಾರೆ. ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿತು. ಈ ಮೂಲಕ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ನಿಗದಿಪಡಿಸಿತು.





