ರಾಜ್ಯದ ಜನರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆ ಸಮರ ಶುರು ಮಾಡಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರೋ ಕೆಮಿಕಲ್ ಉತ್ಪನ್ನಗಳನ್ನು ಒಂದಾದ ಮೇಲೊಂದರಂತೆ ಬ್ಯಾನ್ ಮಾಡ್ತಿದೆ ರಾಜ್ಯ ಆರೋಗ್ಯ ಇಲಾಖೆ. ಫುಡ್ ಪ್ರಾಡಕ್ಟ್‌ಗಳಿಂದ..ತಂಬಾಕು ಉತ್ಪನ್ನಗಳಿಂದ ಶುರುವಾದ ಈ ಹೆಲ್ತ್ ಸರ್ಜಿಕಲ್ ಸ್ಟೈಕ್ ಈಗ ಟ್ಯಾಟು..ಲಿಪ್‌ಸ್ಟಿಕ್..ಮೆಹಂದಿಗಳವರೆಗೂ ಬಂದು ನಿಂತಿದೆ. ಇಷ್ಟು ದಿನ ರಾಜಾರೋಷವಾಗಿ ಜನರಿಗೆ ಕೆಮಿಕಲ್‌ಯುಕ್ತ ಉತ್ಪನ್ನಗಳನ್ನು ತಿನ್ನಿಸುತ್ತಿದ್ದ ಕಂಪನಿಗಳಿಗೆ ಆರೋಗ್ಯ ಇಲಾಖೆ ಸೈಲೆಂಟಾಗೇ ಬಿಸಿ ಮುಟ್ಟಿಸಿದೆ.
ಆಹಾರಗಳಲ್ಲಿ ಹಾನಿಕಾರಕ ರಾಸಾಯನಿಕ ಬಣ್ಣ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ತಕ್ಷಣವಲ್ಲದಿದ್ದರೂ ನಿಧಾನಗತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುಟ್ಟ ಮಕ್ಕಳು ಅತೀ ಹೆಚ್ಚು ಕೃತಕ ಬಣ್ಣ ಬಳಸಿದ ಆಹಾರವನ್ನು ಸೇವಿಸುವುದರಿಂದ ಅತಿ ತೂಕ, ಬೊಜ್ಜು ಬರುವ ಸಾಧ್ಯತೆಗಳು ಇವೆ. ಯೌವನಾವಸ್ಥೆಯಲ್ಲಿ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ನರ ದೌರ್ಬಲ್ಯ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಉಂಟು ಮಾಡೋ ಆಹಾರ ಪದಾರ್ಥಗಳು, ಉತ್ಪನ್ನಗಳ ವಿರುದ್ಧ ಸಮರ ಸಾರಿದೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) 2003 ರ ಸೆಕ್ಷನ್ 6 ರ ಅಡಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲು ಒಂದು ನಿಬಂಧನೆಯನ್ನು ಮಾಡಲಾಗಿದೆ. ಈ ಕಾಯಿದೆಯ ಅಡಿಯಲ್ಲಿ, ಯಾವುದೇ ಶಿಕ್ಷಣ ಸಂಸ್ಥೆಯ 100 ಗಜಗಳ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಬಳಿಕ ರಾಜ್ಯದಲ್ಲಿ ಹುಕ್ಕಾದಿಂದ ಆಗುತ್ತಿರುವ ಆರೋಗ್ಯ ಪರಿಣಾಮಗಳನ್ನು ಮನಗಂಡು ಹುಕ್ಕಾ ಬಾರ್‌ಗಳನ್ನೂ ಬ್ಯಾನ್ ಮಾಡಲಾಗಿದೆ. ಘಟಾನುಘಟಿ ವ್ಯಾಪಾರಸ್ಥರ ಪ್ರಭಾವಕ್ಕೆ ಮಣಿಯದೇ ಜನರ ಆರೋಗ್ಯವೇ ನಮ್ಮ ಮೊದಲ ಆದ್ಯತೆ ಅನ್ನೋ ಗುರಿಯೊಂದಿಗೆ ರಾಜ್ಯ ಆರೋಗ್ಯ ಇಲಾಖೆ ದೊಡ್ಡ ಹೆಜ್ಜೆ ಇಟ್ಟಿದೆ.
ಚಾಟ್ಸ್ ಐಟಂಗಳಲ್ಲಿ ಅತಿಹೆಚ್ಚು ಮಾರಾಟವಾಗೋ ಗೋಬಿ ಮಂಚೂರಿ..ಕಬಾಬ್..ಪಾನಿಪುರಿಗಳಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಕಾರಕ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ಮನಗಂಡ ಆರೋಗ್ಯ ಇಲಾಖೆ ಕೆಮಿಕಲ್‌ಯುಕ್ತ ಗೋಬಿ..ಕಬಾಬ್.. ಪಾನಿಪುರಿಗಳನ್ನು ಬ್ಯಾನ್ ಮಾಡಿದೆ.
ಕ್ಯಾನ್ಸರ್‌ಕಾರಕವಿರುವ ಸಾಸ್, ಮೀಟಾ, ಖಾರದ ಪುಡಿ, ಫುಡ್ ಕಲರ್‌ಗಳನ್ನು ಬಳಸುತ್ತಿರೋ ಬಗ್ಗೆ ವರದಿ ಪಡೆದು ಇದನ್ನೆಲ್ಲ ನಿಷೇಧ ಮಾಡಿದೆ. ಆಹಾರ ಪದಾರ್ಥಗಳಲ್ಲಿ ಕೆಮಿಕಲ್ ಕಲರ್ ಬಳಸಿದ್ರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಾತರಿ ಎಂದು ಹೇಳಿದೆ. ಬರೀ ನಿಷೇಧ ಹೇರಿ ಸುಮ್ಮನೆ ಕೂರದ ಆರೋಗ್ಯ ಇಲಾಖೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಎಲ್ಲಾ ಗೋಬಿ ಸೆಂಟರ್, ಪಾನಿಪುರಿ ಅಂಗಡಿಗಳಲ್ಲಿ ತಪಾಸಣೆಯನ್ನೂ ಮಾಡಿಸುತ್ತಿದೆ.
ಇನ್ನು ಪುಟ್ಟ ಪುಟ್ಟ ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನೋ ಕಾಟನ್ ಕ್ಯಾಂಡಿಗಳಲ್ಲೂ ದೇಹಕ್ಕೆ ಹಾನಿ ಉಂಟು ಮಾಡುವ ಕೆಮಿಕಲ್ ಬಳಸೋದನ್ನು ಮನಗಂಡು ರಾಜ್ಯದಲ್ಲಿ ಕಾಟನ್ ಕ್ಯಾಂಡಿಯನ್ನು ಸರ್ಕಾರ ನಿಷೇಧಿಸಿದೆ. ಬೀದಿ ಬೀದಿಗಳಲ್ಲಿ ಬಣ್ಣ ಬಣ್ಣದ ಕಾಟನ್ ಕ್ಯಾಂಡಿ ಮಾರುತ್ತಿದ್ದ ಮಾರಾಟಗಾರರು ಈಗ ಬರಿ ಬಿಳಿಯ ಬಣ್ಣದ ಕಾಟನ್ ಕ್ಯಾಂಡಿಗಳನ್ನು ಮಾಡುತ್ತಿರೋದನ್ನು ನಾವೆಲ್ಲಾ ನೋಡಿದ್ದೇವೆ.
ಹಸಿರು ಬಟಾಣಿ ಹಾಗೂ ಎಣ್ಣೆಯಲ್ಲಿ ಕರಿದ ಹಸಿರು ಬಟಾಣಿಯಲ್ಲಿ ಕಲರಿಂಗ್ ಏಜೆಂಟ್ ಬಳಸಿರುವುದು ಪತ್ತೆಯಾಗಿತ್ತು. 106 ಮಾದರಿಗಳನ್ನು ಸಂಗ್ರಹಿಸಿ 31 ಸ್ಯಾಂಪಲ್ಸ್ ವಿಶ್ಲೇಷಣೆಗೆ ಒಳಪಡಿಸಿದಾಗ 31 ಮಾದರಿಗಳಲ್ಲಿ 26 ಮಾದರಿಗಳು ಅಸುರಕ್ಷಿತ ಎಂಬುದು ಪತ್ತೆಯಾಗಿತ್ತು. ಹೀಗಾಗಿ ಹಸಿ ಬಟಾಣಿಯಲ್ಲಿ ಕೆಮಿಕಲ್ ಕಲರ್ ಬಳಸಿ ಮಾರಾಟ ಮಾಡೋದನ್ನು ಬ್ಯಾನ್ ಮಾಡಿ, ಜನರ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಿದೆ.
ರಾಜ್ಯದ ಜನರ ಆರೋಗ್ಯ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಅನ್ನೋ ಧ್ಯೇಯದೊಂದಿಗೆ, ಮೊನ್ನೆ ಮೊನ್ನೆಯಷ್ಟೇ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದೆ. ಹೋಟೆಗಳಲ್ಲಿ ಇಡ್ಲಿ ಮಾಡಲು ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸುತ್ತಿದ್ದವರಿಗೆ ಶಾಕ್ ನೀಡಲಾಗಿದೆ. ಮೊದಲಿನಂತೆ ಇಡ್ಲಿ ಮಾಡಲು ಕಾಟನ್ ಬಟ್ಟೆಗಳನ್ನಷ್ಟೇ ಉಪಯೋಗಿಸಿ ಜನರ ಆರೋಗ್ಯ ಕಾಪಾಡುವಂತೆ ಮಾಡಿದೆ ನಮ್ಮ ಆರೋಗ್ಯ ಇಲಾಖೆ.
ಇನ್ನು ಕೇಕ್-ಐಸ್ ಕ್ರೀಂಗಳಲ್ಲೂ ಕೆಮಿಕಲ್ ಬಳಸದಂತೆ ನಿಷೇಧಿಸಲಾಗಿದೆ. ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ ಕಲರ್‌ಗಳು ಹಾನಿಕಾರಕ ಎನ್ನಲಾಗಿದೆ.
ಕೇಕ್‌ಗಳು ಆಕರ್ಷಕವಾಗಿ ಕಾಣಲು ಮತ್ತು ತುಂಬಾ ಸಮಯ ಹಾಳಾಗದಂತೆ ಕಾಪಾಡಲು ಹೆಚ್ಚು ಕಲರ್‌ಗಳನ್ನು, ಟೇಸ್ಟಿಂಗ್ ಪೌಡರ್ ಗಳನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅದೇ ಕಾರಣಕ್ಕಾಗಿ ಆ ಬಣ್ಣಗಳನ್ನು ಬಳಸದಂತೆ ಆಹಾರ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಬಹಳಷ್ಟು ಜನ ಇಷ್ಟ ಪಟ್ಟು ಟ್ಯಾಟೂ ಹಾಕಿಸಿಕೊಳ್ತಾರೆ ಆದರೆ ಈ ಟ್ಯಾಟೂ ಹಾಕಲು ಬಳಸುವ ಬಣ್ಣ ಅಪಾಯಕಾರಿಯಾಗಿದೆ ಅಂತ ವರದಿಯಲ್ಲಿ ಬಹಿರಂಗಗೊಂಡಿದೆ. ಟ್ಯಾಟೂ ಬಣ್ಣದಲ್ಲಿ 22 ಹೆವಿ ಮೆಟಲ್ ಇದ್ದು, ಇದು ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಟ್ಯಾಟೂ ಬ್ಯಾನ್‌ಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಇದರ ಜೊತೆಗೆ ಹೆಣ್ಮಕ್ಕಳ ಮೋಸ್ಟ್ ಫೇವರೆಟ್ ಆಗಿರೋ ಮೆಹಂದಿಯಲ್ಲೂ ಚರ್ಮದ ಕಾನ್ಸರ್ ಉಂಟು ಮಾಡೋ ಅಂಶಗಳು ಪತ್ತೆಯಾಗಿವೆ. ಈ ಹಿನ್ನೆಲೆ ಮೆಹಂದಿಯೂ ನಿಷೇಧವಾಗಬಹುದು ಎನ್ನಲಾಗಿದೆ. ಇನ್ನು ಹೆಣ್ಮಕ್ಕಳು ಹಚ್ಚಿಕೊಳ್ಳುವ ಲಿಪ್ಸ್ಟಿಕ್ನಲ್ಲಿ ಕಳಪೆ ಗುಣಮಟ್ಟದ ಬಣ್ಣ, ವ್ಯಾಕ್ಸ್ ಬಳಕೆ ಮಾಡಿರೋದು ಆತಂಕಕಾರಿಯಾಗಿದೆ. ಇದು ಕ್ಯಾನ್ಸರ್ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.
ಕಳಪೆ ಲಿಪ್ಸ್ಟಿಕ್ನಿಂದ ಅಲರ್ಜಿಕ್ ರಿಯಾಕ್ಷನ್ ಜೊತೆಗೆ ತುಟಿಗಳ ನ್ಯಾಚುರಲ್ ಪಿಂಗ್ಮೆಂಟೇಷನ್ ಹಾಳಾಗುತ್ತದೆ ಅನ್ನೋ ಕಾರಣದಿಂದ ಕೆಮಿಕಲ್ ಹೆಚ್ಚಾಗಿರೋ ಲಿಪ್‌ಸ್ಟಿಕ್‌ಗಳನ್ನು ಬ್ಯಾನ್ ಮಾಡೋ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಆಹಾರ ಮತ್ತು ಆರೋಗ್ಯ ಇಲಾಖೆ 5 ಸಾವಿರ ಅಧಿಕ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿರುವುದು ತಿಳಿದಿದೆ. ಜನವರಿ ತಿಂಗಳಲ್ಲಿ 3608 ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಇವುಗಳಲ್ಲಿ 28 ಆಹಾರ ಪದಾರ್ಥಗಳು ಆರೋಗ್ಯ ಮಾರಕವಾಗಿದೆ ಎಂಬುದು ಗೊತ್ತಾಗಿದೆ. ಫೆಬ್ರವರಿ ತಿಂಗಳಲ್ಲಿ 2543 ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಇವುಗಳಲ್ಲಿ 8 ಮಾದರಿಗಳು ಅಸುರಕ್ಷಿತ ಎಂಬುದು ತಿಳಿದಿದೆ. ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೆಹಂದಿ ಪೌಡರ್, ಐ ಲೈನರ್, ಕಾಜಲ್ ಮಾರಾಟ ಮಾಡಲಾಗುತ್ತಿದ್ದು ಇವೆಲ್ಲವನ್ನೂ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.