ಬೆಂಗಳೂರು: ಕರ್ನಾಟಕದಲ್ಲಿ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಹೆಚ್ಚಾಗಿದೆ. ಇತ್ತೀಚೆಗೆ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ, ಈಗ ಜನವರಿ 26ರ ಗಣರಾಜ್ಯೋತ್ಸವದ ಭಾಷಣದ ವಿಚಾರ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧಪಡಿಸಿದೆ.
ವಿವಾದಕ್ಕೆ ಕಾರಣವೇನು ?
ಗಣರಾಜ್ಯೋತ್ಸವದಂದು ರಾಜ್ಯಪಾಲರು ಓದುವ ಭಾಷಣವನ್ನು ಆಯಾ ರಾಜ್ಯ ಸರ್ಕಾರವೇ ಸಿದ್ಧಪಡಿಸುತ್ತದೆ. ಆದರೆ, ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿರುವ ಭಾಷಣದ ಕರಡಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಸರ್ಕಾರದ ಭಾಷಣದಲ್ಲಿರುವ ಅಂಶಗಳು:
-
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಹಂಚಿಕೆಯ ಅನ್ಯಾಯ.
-
ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನೀಡುತ್ತಿರುವ ಮಲತಾಯಿ ಧೋರಣೆ.
-
ಕೇಂದ್ರದ ಆರ್ಥಿಕ ನೀತಿಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವ ಬಗ್ಗೆ ಟೀಕೆಗಳು.
ಈ ಅಂಶಗಳು ಭಾಷಣದಲ್ಲಿ ಇರುವುದರಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕೇಂದ್ರದ ವಿರುದ್ಧದ ರಾಜಕೀಯ ಟೀಕೆಗಳನ್ನು ಓದಲು ಸಾಧ್ಯವಿಲ್ಲ ಎಂದು ಗೆಹ್ಲೋಟ್ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರ ಖಡಕ್ ಎಚ್ಚರಿಕೆ
ಸರ್ಕಾರ ನೀಡಿದ ಭಾಷಣವನ್ನು ಹಾಗೆಯೇ ಓದಲು ನಿರಾಕರಿಸಿರುವ ರಾಜ್ಯಪಾಲರು, ಒಂದು ವೇಳೆ ಸರ್ಕಾರವು ಟೀಕೆಗಳನ್ನು ತೆಗೆದುಹಾಕಿ ಭಾಷಣವನ್ನು ತಿದ್ದುಪಡಿ ಮಾಡದಿದ್ದರೆ, ನಾನೇ ಸ್ವತಃ ಸಿದ್ಧಪಡಿಸಿದ ಭಾಷಣವನ್ನು ಓದುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಕಳೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಪೂರ್ಣವಾಗಿ ಓದದೆ, ಕೇವಲ ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ಸದನದಿಂದ ಹೊರನಡೆದಿದ್ದರು. ಈ ಸಂದರ್ಭದಲ್ಲಿ ಸದನದಲ್ಲಿ ಭಾರೀ ಗದ್ದಲ ಉಂಟಾಗಿತ್ತು. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಪಾಲರನ್ನು ತಡೆಯಲು ಪ್ರಯತ್ನಿಸಿದಾಗ ಮಾರ್ಷಲ್‌ಗಳ ಜೊತೆ ತಳ್ಳಾಟ ನಡೆದು, ಅವರ ಅಂಗಿ ಹರಿದುಹೋದ ಘಟನೆಯೂ ನಡೆದಿತ್ತು.
ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ!
ಕರ್ನಾಟಕ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರ ತಯಾರಿಸಿದ ಭಾಷಣದ ಕೇವಲ ಎರಡು ಸಾಲುಗಳಷ್ಟೇ ಓದಿ ಹೊರಟುಹೋದ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯಪಾಲರು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ” ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಟೀಕಿಸಿದ್ದಾರೆ.ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ರಾಜ್ಯಪಾಲರು ಯಾವುದೇ ಸಂದರ್ಭದಲ್ಲಿ ತಾವು ಸಿದ್ಧಪಡಿಸಿದ ಭಾಷಣವನ್ನು ಓದಬಹುದು ಎಂದು ಸಂವಿಧಾನದಲ್ಲಿ ಯಾವುದೇ ನಿಯಮವಿಲ್ಲ. ಸರ್ಕಾರ ತಯಾರಿಸಿದ ಭಾಷಣವನ್ನೇ ಅವರು ಓದಬೇಕು. ಇದು ಸಂವಿಧಾನದ ನಿಯಮ. ಆದರೆ ರಾಜ್ಯಪಾಲರು ಇದನ್ನು ಉಲ್ಲಂಘಿಸಿದ್ದಾರೆ” ಎಂದು ಹೇಳಿದರು.
ಮುಖ್ಯಮಂತ್ರಿ ಮುಂದುವರೆದು, “ಕೇಂದ್ರ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ರಾಜ್ಯಪಾಲರನ್ನು ಬಳಸಿಕೊಂಡಿದೆ. ರಾಜ್ಯಪಾಲರು ಕರ್ತವ್ಯ ಪಾಲಿಸದೇ ಬೇಜವಾಬ್ದಾರಿಯಿಂದ ನಡೆದಿದ್ದಾರೆ. ಇದು ಸರಿಯಲ್ಲ” ಎಂದು ಆರೋಪಿಸಿದರು. ಈ ಘಟನೆಯನ್ನು ಖಂಡಿಸಿ ಸರ್ಕಾರ ಉಗ್ರ ಹೋರಾಟ ನಡೆಸಲಿದೆ ಎಂದು ಸೂಚಿಸಿದರು.
ಏನು ನಡೆಯಿತು? ಇಂದು ಬೆಳಗ್ಗೆ ವಿಧಾನಸಭೆಯ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಗೀತೆಯ ನಂತರ ಸದನಕ್ಕೆ ಆಗಮಿಸಿ ಕನ್ನಡದಲ್ಲಿ “ಎಲ್ಲರಿಗೂ ನಮಸ್ಕಾರ” ಎಂದು ಹೇಳಿ, ಸರ್ಕಾರ ತಯಾರಿಸಿದ ಭಾಷಣದ ಮೊದಲ ಎರಡು ಸಾಲುಗಳಷ್ಟೇ ಓದಿ ತಕ್ಷಣ ಹೊರಟುಹೋದರು. ಭಾಷಣದಲ್ಲಿ MGNREGAಯನ್ನು VB-G RAM G ಕಾಯ್ದೆಯಿಂದ ಬದಲಾಯಿಸಿರುವುದು, ಬರ ಪರಿಹಾರ ನಿಧಿ ವಿಳಂಬ, ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮುಂತಾದ 11 ಅಂಶಗಳನ್ನು ರಾಜ್ಯಪಾಲರು ಓದಲು ನಿರಾಕರಿಸಿದ್ದರು.
ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ಹೊರಡುವ ದಾರಿಯಲ್ಲೇ ಹಿಂದಿಂದ ಹೊರಟು ಘೋಷಣೆಗಳನ್ನು ಕೂಗಿದರು. ಸದನದಲ್ಲಿ ಭಾರಿ ಗದ್ದಲ ನಡೆಯಿತು. ಸ್ಪೀಕರ್ ಅವರ ಮನವೊಲಿಕೆಗೂ ರಾಜ್ಯಪಾಲರು ಕಿವಿಗೊಡದೇ ಹೊರಟರು.





