ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿವೆ. ವಿಶೇಷವಾಗಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ, ಗೃಹಲಕ್ಷ್ಮಿ ಯೋಜನೆ, ಉಚಿತ ಆಹಾರ ಧಾನ್ಯಗಳಂತಹ ಯೋಜನೆಗಳು ಗ್ರಾಮೀಣ ಮಹಿಳೆಯರ ಜೀವನದಲ್ಲಿ ಭದ್ರತೆ ತಂದಿರುವುದು ನಿಜ. ಆದರೆ, ಇದರ ಪರಿಣಾಮವಾಗಿ ಕೃಷಿ ಕಾರ್ಯ ಮಾಡಲು ಕಾರ್ಮಿಕರಿಲ್ಲದೇ ಕೃಷಿ ವಲಯ ತತ್ತರಿಸಿ ಹೋಗಿದೆ.
ಉಚಿತ ಬಸ್ ಸೇವೆ ಆರಂಭವಾದ ಬಳಿಕ ಗ್ರಾಮೀಣ ಭಾಗದ ದುಡಿಯುವ ವರ್ಗದ ಮಹಿಳೆಯರು ಕೃಷಿ ಕೆಲಸಗಳಿಗೆ ಗುಡ್‌ಬೈ ಹೇಳಿ ಪಟ್ಟಣ–ನಗರಗಳತ್ತ ಮುಖ ಮಾಡಿದ್ದಾರೆ. ಬೆಳಗಿನ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದೆ. ಮನೆಗೆಲಸ, ಬಟ್ಟೆ ಅಂಗಡಿ, ಹೋಟೆಲ್, ಮದುವೆ ಮತ್ತು ಕೆಟರಿಂಗ್ ಕೆಲಸಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಲಭ್ಯವಿರುವ ಉದ್ಯೋಗಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಿವೆ. ಬೆಳಗ್ಗೆ ನಗರಕ್ಕೆ ತೆರಳಿ ಸಂಜೆ ಮನೆಗೆ ಮರಳುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬಿಸಿಲಿನಲ್ಲಿ ಗಂಟೆಗಟ್ಟಲೆ ದುಡಿಯಬೇಕು, ದೈಹಿಕ ಶ್ರಮ ಅಧಿಕ, ಆದರೆ ಸಿಗುವ ಕೂಲಿ ಕಡಿಮೆ. ಅದಕ್ಕೆ ಹೋಲಿಸಿದರೆ ನಗರ ಉದ್ಯೋಗಗಳು ಕಡಿಮೆ ಶ್ರಮ, ಸಮಯವೂ ನಿಗದಿತವಾಗಿದ್ದು, ಕೂಲಿ ಉತ್ತಮವಾಗಿದೆ. ಹಿಂದೆ ಬಸ್ ಪ್ರಯಾಣಕ್ಕೆ ಅರ್ಧ ಸಂಬಳವೇ ಖರ್ಚಾಗುತ್ತಿದ್ದ ಕಾರಣ ನಗರ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದ ಮಹಿಳೆಯರು, ಈಗ ಉಚಿತ ಬಸ್ ಸೌಲಭ್ಯದಿಂದ ಸಿಗುವ ಸಂಪೂರ್ಣ ಕೂಲಿಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೃಷಿ ವಲಯದಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಿತ್ತನೆ, ಕಳೆ ತೆಗೆಯುವುದು, ಕೊಯ್ಲು ಕಾರ್ಯಗಳಿಗೆ ಕೂಲಿ ಕಾರ್ಮಿಕರು ಸಿಗದೆ ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ, ಕಾರ್ಮಿಕರ ಕೊರತೆಯಿಂದ ಗದ್ದೆಯಲ್ಲೇ ನಾಶವಾಗುತ್ತಿದೆ. “ಊರೆಲ್ಲ ಹುಡುಕಿದರೂ ಈಗ ಕೃಷಿ ಕೆಲಸಕ್ಕೆ ಮಹಿಳೆಯರು ಸಿಗುತ್ತಿಲ್ಲ” ಎಂಬುದು ರೈತರಿಗೆ ಸಮಸ್ಯೆಯಾಗಿದೆ.
ಕೃಷಿ ಕುಟುಂಬಗಳಲ್ಲಿ ನಾಲ್ಕೈದು ಜನ ದುಡಿಯುವವರು ಇದ್ದರೆ ಮಾತ್ರ ಕೃಷಿ ಮುಂದುವರಿಸಲು ಸಾಧ್ಯ. ಆದರೆ, ಹೆಚ್ಚಿನ ಕುಟುಂಬಗಳಲ್ಲಿ ಯುವಕರು ಮತ್ತು ಮಹಿಳೆಯರು ನಗರ ಉದ್ಯೋಗಗಳತ್ತ ಹೋಗಿರುವುದರಿಂದ, ಒಬ್ಬಂಟಿಯಾಗಿ ಕೃಷಿ ನಡೆಸುವ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ಮಧ್ಯಮ ಮತ್ತು ದೊಡ್ಡ ಜಮೀನು ಹೊಂದಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ ಕೆಲ ರೈತರು ಪರಸ್ಪರ ಸಹಕಾರದ ಮೂಲಕ ಕೃಷಿ ಕಾರ್ಯ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಎರಡು–ಮೂರು ಕುಟುಂಬಗಳು ಸೇರಿ ಕೆಲಸ ಹಂಚಿಕೊಂಡು ಕೃಷಿ ನಡೆಸುತ್ತಿರುವ ಉದಾಹರಣೆಗಳೂ ಇವೆ. ಆದರೆ, ಇದು ಸಣ್ಣ ಜಮೀನಿಗೆ ಮಾತ್ರ ಸಾಧ್ಯವಾಗಿದ್ದು, ಹೆಚ್ಚಿನ ಜಮೀನು ಹೊಂದಿರುವವರಿಗೆ ಈ ವಿಧಾನ ಸಾಕಾಗುತ್ತಿಲ್ಲ.
ಇದಕ್ಕೆ ಮತ್ತೊಂದು ಪ್ರಮುಖ ಕಾರಣ ಎಂದರೆ, ಈಗ ದುಡಿಯದೇ ಇದ್ದರೂ ಬದುಕು ಸಾಗುವ ವ್ಯವಸ್ಥೆ ರೂಪುಗೊಂಡಿರುವುದು. ಬಹುತೇಕ ದುಡಿಯುವ ವರ್ಗದ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಮೂಲಕ ಉಚಿತ ಅಕ್ಕಿ ಸಿಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 2000 ರೂ. ದೊರೆಯುತ್ತಿದೆ. ಕುಟುಂಬದಲ್ಲಿ ಹಿರಿಯರು, ಅಂಗವಿಕಲರು ಇದ್ದರೆ ಸಂಧ್ಯಾ ಸುರಕ್ಷಾ ಅಥವಾ ಪಿಂಚಣಿ ಯೋಜನೆಯ ಲಾಭವೂ ಲಭ್ಯ. ಹೀಗಾಗಿ “ದುಡಿದರೆ ಮಾತ್ರ ಹೊಟ್ಟೆ ತುಂಬುತ್ತದೆ” ಎಂಬ ಹಳೆಯ ಕಾಲದ ನಿಯಮ ಈಗ ನಿಧಾನವಾಗಿ ಮಂಕಾಗುತ್ತಿದೆ.
ಒಟ್ಟಿನಲ್ಲಿ, ಪಂಚಗ್ಯಾರಂಟಿ ಯೋಜನೆಗಳು ಸಾಮಾಜಿಕ ಭದ್ರತೆ ಒದಗಿಸಿದರೂ, ಕೃಷಿ ವಲಯದ ಮೇಲೆ ಅದರ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇಲ್ಲದಿದ್ದರೆ, ಕಾರ್ಮಿಕರ ಕೊರತೆಯಿಂದ ಕೃಷಿಯೇ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.





