ರಾಯಚೂರು: ಮಾಜಿ ಸಚಿವ ಮತ್ತು ದೇವದುರ್ಗದ ಮಾಜಿ ಶಾಸಕ ಕೆ.ಶಿವನಗೌಡ ನಾಯಕ್ ನವಿಲುಗರಿ ಹಾರದ ವಿವಾದದಲ್ಲಿ ಸಿಲುಕಿದ್ದಾರೆ. ಜುಲೈ ೧೪ರಂದು ಶಿವನಗೌಡ ನಾಯಕ್‌ರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ನವಿಲುಗರಿಯ ಹಾರ ಧರಿಸಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಪರಿಣಾಮವಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ವಿವಾದದ ಹಿನ್ನೆಲೆ
ಕೆ.ಶಿವನಗೌಡ ನಾಯಕ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅಭಿಮಾನಿಗಳು ತಂದಿರುವ ನವಿಲುಗರಿಯ ಹಾರವನ್ನು ಧರಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳು ಸಾರ್ವಜನಿಕರ ಗಮನ ಸೆಳೆದಿದ್ದು, ಕೆಲವರು ಇದನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಎಂದು ಗುರುತಿಸಿದ್ದಾರೆ. ಭಾರತದ ರಾಷ್ಟ್ರಪಕ್ಷಿಯಾದ ನವಿಲು ಗರಿಗಳನ್ನು ಬಳಸುವುದು ಕಾನೂನಿನ ವಿರುದ್ಧವಾಗಿದ್ದು, ಇದು ಗಂಭೀರ ಆರೋಪಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, “ಕೆ.ಶಿವನಗೌಡ ನಾಯಕ್ ರಾಷ್ಟ್ರಪಕ್ಷಿ ನವಿಲಿನ ಗರಿಯಿಂದ ತಯಾರಿಸಿದ ಹಾರವನ್ನು ಸಾರ್ವಜನಿಕವಾಗಿ ಧರಿಸಿ, ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹರಡುವ ಸಾಧ್ಯತೆಯಿದ್ದು, ಇತರರೂ ಇಂತಹ ಕೃತ್ಯಕ್ಕೆ ಪ್ರೇರಿತರಾಗಬಹುದು,” ಎಂದು ಆರೋಪಿಸಲಾಗಿದೆ. ಕಲ್ಲಹಳ್ಳಿ ಅವರು, ನವಿಲಿನ ಗರಿಯ ಮೂಲವನ್ನು ಪತ್ತೆಹಚ್ಚಿ, ಶಿವನಗೌಡ ನಾಯಕ್ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಶಿವನಗೌಡ ನಾಯಕ್ ಸ್ಪಷ್ಟನೆ
ವಿವಾದ ತಾರಕಕ್ಕೇರಿದ ಬಳಿಕ, ಕೆ.ಶಿವನಗೌಡ ನಾಯಕ್ ತಮ್ಮ ಕಡೆಯಿಂದ ಸ್ಪಷ್ಟನೆ ನೀಡಿದ್ದಾರೆ. “ನಾನು ನವಿಲುಗರಿಯ ಹಾರವನ್ನು ಧರಿಸಿದ್ದು ನಿಜ. ಆದರೆ, ಯಾರೋ ಅಭಿಮಾನಿಗಳು ತಮ್ಮ ಅಭಿಮಾನದಿಂದ ಆ ಹಾರವನ್ನು ತಂದು, ಗದ್ದಲದ ಮಧ್ಯೆ ನನ್ನ ಕೊರಳಿಗೆ ಹಾಕಿದರು. ಇದು ತಪ್ಪಾಯಿತು, ಇಂತಹದ್ದನ್ನು ಸ್ವೀಕರಿಸಬಾರದಿತ್ತು. ಜನಜಂಗುಳಿಯಲ್ಲಿ ಗಮನಿಸದೆ ಈ ತಪ್ಪು ನಡೆದಿದೆ,” ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನಂತರ ಮಾತನಾಡಿದ್ದು “ದೂರು ದಾಖಲಾದ ಬಳಿಕ, ಹಾರವು ನವಿಲಿನ ಗರಿಯದ್ದೆ ಎಂದು ತಿಳಿಯಿತು. ಈಗಾಗಲೇ ಆ ಹಾರವನ್ನು ತೆಗೆದಿಟ್ಟಿದ್ದೇನೆ. ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಬಂದಾಗ, ಆ ಹಾರವನ್ನು ಮರಳಿಸುತ್ತೇನೆ,” ಎಂದು ತಿಳಿಸಿದ್ದಾರೆ.