ಕನಕಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಸ್ವಕ್ಷೇತ್ರಕ್ಕೆ ಮೊದಲ ಭೇಟಿ ನೀಡಿದ ಡಿ.ಕೆ ಶಿವಕುಮಾರ್ ಅವರಿಗೆ ಕನಕಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರಕಿದೆ. ಹಾರೋಹಳ್ಳಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಸ್ತೆಗಿಳಿದು ತಮ್ಮ ನಾಯಕನನ್ನು ಬರಮಾಡಿಕೊಂಡರು.
ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಹಾರೋಹಳ್ಳಿಗೆ ಆಗಮಿಸಿದ ಸಿಎಂ ಡಿಕೆಶಿ ಅವರನ್ನು ಸ್ಥಳೀಯರು ಹೂಮಳೆ ಸುರಿಸಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಆರಂಭವಾದ ಬೃಹತ್ ರೋಡ್ ಶೋದಲ್ಲಿ ಸಿಎಂ ಕೈಬೀಸಿ ಜನತೆಗೆ ಧನ್ಯವಾದ ಸಲ್ಲಿಸಿದರು. “ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ” ಎಂದು ಅವರು ಭಾವುಕ ಮಾತುಗಳನ್ನಾಡಿದರು.
ಹಾರೋಹಳ್ಳಿ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆಯಲ್ಲಿ ಶಾಸಕ ಇಟ್ಬಾಲ್ ಹುಸೇನ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಸಹ ಸಾಥ್ ನೀಡಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸಮೂಹವು “ಡಿಕೆ… ಡಿಕೆ…” ಎಂಬ ಘೋಷಣೆಗಳನ್ನು ಕೂಗುತ್ತಾ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಇಡೀ ಮಾರ್ಗದಲ್ಲಿ ಕಾಂಗ್ರೆಸ್ ಬಾವುಟಗಳು, ಬೃಹತ್ ಬ್ಯಾನರ್‌ಗಳು ಹಾಗೂ ಕಟೌಟ್‌ಗಳು ನಗರವನ್ನು ಅಲಂಕರಿಸಿದ್ದವು.
ಈ ರೋಡ್ ಶೋನಲ್ಲಿ ಹಸಿಮೆಣಸಿನಕಾಯಿ, ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಬಳಸಿ ತಯಾರಿಸಲಾದ ಈ ಬೃಹತ್ ಹಾರವನ್ನು ಕ್ರೇನ್ ಸಹಾಯದಿಂದ ಸಿಎಂ ಅವರಿಗೆ ಅರ್ಪಿಸಲಾಯಿತು. ಸುಮಾರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಯಾರಿಸಿದ ಈ ಹಾರ “ದೃಷ್ಟಿ ತಾಗದಿರಲಿ” ಎಂಬ ನಂಬಿಕೆಯಿಂದ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಟ್ರ್ಯಾಕ್ಟರ್‌ಗಳಲ್ಲಿ ತರಲಾಗಿದ್ದ ಟನ್‌ಗಟ್ಟಲೆ ಹೂವುಗಳನ್ನು ಜನರು ಸುರಿದು ಸಂಭ್ರಮಿಸಿದರು.
ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿತ, ಸಿಹಿ ಹಂಚಿಕೆ ಹಾಗೂ ಜೈಕಾರಗಳು ನಡೆದವು. ಜನಪದ ಕಲಾತಂಡಗಳು ತಮಟೆ, ಡೊಳ್ಳು, ನಗಾರಿ, ಹುಲಿವೇಷ ಮತ್ತು ಪೂಜಾ ಕುಣಿತದ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದವು. ಮಹಿಳೆಯರು ಪೂರ್ಣಕುಂಭದೊಂದಿಗೆ ಸಿಎಂ ಅವರನ್ನು ಗೌರವಿಸಿದರು.
ರೋಡ್ ಶೋ ಸಂದರ್ಭದಲ್ಲಿ ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಾಂಬ್ ಸ್ಕ್ವಾಡ್ ಹಾಗೂ ಭದ್ರತಾ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಸುರಕ್ಷತೆಯನ್ನು ಖಚಿತಪಡಿಸಿಕೊಂಡರು.
ಹಾರೋಹಳ್ಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಸಿಎಂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ರೋಡ್ ಶೋ ಮುಂದುವರೆಸಿದರು. ದಿನಪೂರ್ತಿ ಕನಕಪುರ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಅವರು, ಸಂಜೆ ಚನ್ನಬಸಪ್ಪ ವೃತ್ತದಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.





