ಕರ್ನಾಟಕದ ರಾಜಕೀಯ ವಲಯದಲ್ಲಿ ಇದೀಗ ಬಂಡಾಯದ ಬಿಸಿ ಏರುತ್ತಿದೆ. ಬಿಜೆಪಿಯಲ್ಲಿ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಪ್ರಮುಖ ನಾಯಕರು ಪಕ್ಷದಿಂದ ದೂರವಾಗುವ ಸೂಚನೆಗಳು ಕಾಣುತ್ತಿವೆ. ಈ ಬಾರಿಗೆ ವಿವಾದದ ಕೇಂದ್ರಬಿಂದುವಾಗಿ ಮತ್ತೊಮ್ಮೆ ಪ್ರತ್ಯಕ್ಷರಾಗಿರುವುದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ಬಿಜೆಪಿ ಪಳಾಯದಲ್ಲಿ ಹಲವಾರು ನಾಯಕರ ಅಸಮಾಧಾನದಿಂದ ಹೊರಬರುತ್ತಿರುವುದು ಬಿಜೆಪಿಗೆ ತೀವ್ರ ಪೆಟ್ಟು ನೀಡುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೆಂಬಲ ಸೂಚಿಸುತ್ತಿರುವ ಕೆಲ ನಾಯಕರು ಈಗ ಕಾಂಗ್ರೆಸ್‌ನತ್ತ ಮುಖಮಾಡಿರುವ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಬಂಡಾಯದ ಎರಡು ಬಣಗಳು
ಬಿಜೆಪಿಯಲ್ಲಿ ಬಂಡಾಯದ ನಾಯಕರು ಈಗ ಎರಡು ಬಣಗಳಾಗಿ ವಿಭಜನೆಯಾಗಿದ್ದಾರೆ. ಒಂದು ಬಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಸಮ್ಮಿಲನದ ಹಾದಿ ಹಿಡಿದರೆ, ಮತ್ತೊಂದು ಬಣ ನೇರವಾಗಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಹಾದಿ ಹಿಡಿದಿದೆ.
ಬಿ.ಪಿ. ಹರೀಶ್ ಮತ್ತು ಜಿ.ಎಂ. ಸಿದ್ದೇಶ್ವರ್ ಅವರ ನಡೆ ಅನುಮಾನಕ್ಕೆ ಕಾರಣವಾಗಿದೆ. ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಹಾಗೂ ದಾವಣಗೆರೆ ಮಾಜಿ ಸಂಸದ ಸಿದ್ದೇಶ್ವರ್, ಕಾಂಗ್ರೆಸ್ ನಾಯಕ ಡಿಕೆಶಿ ಅವರ ನಿವಾಸಕ್ಕೆ ಭೇಟಿ ನೀಡಿರುವ ದೃಶ್ಯಗಳು ಈಗ ಬಹಿರಂಗವಾಗಿವೆ. ಇದರಿಂದಾಗಿ ಈ ಇಬ್ಬರು ಕಾಂಗ್ರೆಸ್ ಸೇರ್ಪಡೆಯ ಹಾದಿಯಲ್ಲಿ ಇರುವುದಾಗಿ ಗಾಸಿಪ್‌ಗಳು ಕೇಳಿಬರುತ್ತಿವೆ.
ಯತ್ನಾಳ್ ತಂಡದ ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಪ್ಲಾನ್?
ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗಲೇ, ಯತ್ನಾಳ್ ನೇತೃತ್ವದ ತಂಡವು ಬಿಜೆಪಿ ಹೊರಗೆ ನಿಂತು ಹೊಸ ರಾಜಕೀಯ ತಂತ್ರ ರೂಪಿಸುತ್ತಿದೆಯೆನ್ನುವುದು ರಾಜಕೀಯ ವಲಯದ ಮಾತು. ಈ ತಂಡದ ಕೆಲವು ಸದಸ್ಯರು ಈಗಾಗಲೇ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದು, ಮುಂದಿನ ಹೆಜ್ಜೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಬಗ್ಗೆ ನಿರೀಕ್ಷೆ ಮೂಡಿಸಿದೆ.
ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಬಳಿಕ ಹರೀಶ್..?
ಈ ಹಿಂದೆ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಬಿಜೆಪಿ ತೊರೆದಿದ್ದರು. ಆದರೆ ಇದೀಗ ಹರೀಶ್ ಹಾಗೂ ಸಿದ್ದೇಶ್ವರ್ ನೇರವಾಗಿ ಕಾಂಗ್ರೆಸ್ ನಾಯಕರಿಗೆ ಹಸ್ತಲಾಘವ ನೀಡುತ್ತಿರುವುದು, ಬಂಡಾಯದ ದಾರಿ ಸ್ಪಷ್ಟವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದರಿಂದಾಗಿ ಬಿಜೆಪಿ ಮುಖಂಡರಲ್ಲಿಯೇ ಭಿನ್ನಮತದ ಅಲೆ ಉಂಟಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕ ಡಿಕೆಶಿ ಅವರು ಪಕ್ಷದ ಭವಿಷ್ಯದ ತಂತ್ರದಲ್ಲಿ ಬಂಡಾಯ ನಾಯಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ. ಕರ್ನಾಟಕದ ರಾಜಕೀಯದಲ್ಲಿ ಬಂಡಾಯದ ಹೊಸ ಅಧ್ಯಾಯ ಆರಂಭವಾಗಿದೆ. ಯತ್ನಾಳ್ ನೇತೃತ್ವದ ಬಂಡಾಯ ಬಣದ ಮುಂದಿನ ನಡೆ ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ.





