ಕಲಬುರಗಿ: ಬಿಜೆಪಿ ಕಾರ್ಯಕರ್ತೆ ಒಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. 35 ವರ್ಷಿಯ ಜ್ಯೋತಿ ಪಾಟೀಲ್ ಅವರು ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೃತ ಜ್ಯೋತಿ ಪಾಟೀಲ್ ಅವರು ಕಲಬುರಗಿಯ ಬ್ರಹ್ಮಪೂರ ಬಡಾವಣೆಯ ನಿವಾಸಿಯಾಗಿದ್ದು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತೆಯಾಗಿದ್ದರು. ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ಜ್ಯೋತಿ ಪಾಟೀಲ್ ಅವರು ನಂದಿಕೂರ ಗ್ರಾಮದ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಅವರ ಮನೆಗೆ ತೆರಳಿದ್ದರು. ಆ ವೇಳೆ ಮಲ್ಲಿನಾಥ್ ಬಿರಾದಾರ್ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಅವರ ಪತ್ನಿ ಹಾಗೂ ಮೂರು ಮಕ್ಕಳು ಇದ್ದರು. ಜ್ಯೋತಿ ಬಾಗಿಲು ತಟ್ಟಿದಾಗ ಮಲ್ಲಿನಾಥ್ ಅವರ ಪತ್ನಿ ಬಾಗಿಲು ತೆರೆದಿದ್ದಾರೆ. ಅದೇ ಕ್ಷಣದಲ್ಲಿ ಜ್ಯೋತಿ ಪಾಟೀಲ್ ಅವರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಘಟನೆ ನಡೆದ ತಕ್ಷಣ ಮನೆಯವರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ, ಜ್ಯೋತಿ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಫರಹತಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆಯ ವೇಳೆ ಪೆಟ್ರೋಲ್ ಡಬ್ಬಿ ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ನಮ್ಮ ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು: ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ದುರ್ಘಟನೆಯೊಂದು ನಡೆದಿದ್ದು, ಪ್ರಯಾಣಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇಂದು ಬೆಳಗ್ಗೆ ಸುಮಾರು 8:15ರ ವೇಳೆಗೆ ನೇರಳ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಭವಿಸಿದ ಕೂಡಲೇ ನಿಲ್ದಾಣ ಸಿಬ್ಬಂದಿ ಹಾಗೂ ರಕ್ಷಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಮೆಟ್ರೋ ಸಂಚಾರವನ್ನು ನಿಲ್ಲಿಸಲಾಗಿದೆ.
ಘಟನೆಯ ಬಗ್ಗೆ ತಿಳಿದ ತಕ್ಷಣ ಬಿಂಎಂಆರ್‌ಸಿಎಲ್ ಅಧಿಕಾರಿಗಳು ಪೊಲೀಸರು ಆಗಮಿಸುವವರೆಗೆ ಸ್ಥಳವನ್ನು ಸಂಪೂರ್ಣವಾಗಿ ಸೀಲ್ ಮಾಡಿ ಕ್ರಮ ಕೈಗೊಂಡಿದ್ದಾರೆ. ತನಿಖೆ ನಡೆಸಲು ಕೆಂಗೇರಿ ಟ್ರಾಫಿಕ್ ಪೊಲೀಸ್ ಹಾಗೂ ರೈಲು ಪೊಲೀಸ್ ತಂಡಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಇನ್ನು ಯಾವುದೇ ವಿವರಗಳು ಲಭ್ಯವಾಗಲಿಲ್ಲ. ವ್ಯಕ್ತಿಯ ಗುರುತು, ಆತ್ಮಹತ್ಯೆಗೆ ಕಾರಣ ಸೇರಿದಂತೆ ಎಲ್ಲಾ ವಿಚಾರಗಳು ತನಿಖೆಯ ನಂತರ ತಿಳಿಯಬೇಕಿದೆ.
ಈ ಘಟನೆಯ ಪರಿಣಾಮ ನೇರಳ ಮಾರ್ಗದ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಂಗೇರಿ–ಚೆಲ್ಲಘಟ್ಟ ನಡುವೆ ಮೆಟ್ರೋ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮೈಸೂರು ರಸ್ತೆ–ಚೆಲ್ಲಘಟ್ಟವರೆಗೆ ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕರಿಗೆ ಕೆಲವು ಗಂಟೆಗಳ ಕಾಲ ಪರ್ಯಾಯ ವ್ಯವಸ್ಥೆಗಳು ಲಭ್ಯವಿದ್ದರೂ, ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಮೈಸೂರು ರಸ್ತೆ ನಿಲ್ದಾಣದಿಂದ ವೈಟ್‌ಫೀಲ್ಡ್ (Kadugodi)ವರೆಗೆ ಮಾತ್ರ ಮೆಟ್ರೋ ಸಂಚಾರವನ್ನು ಮುಂದುವರಿಸಲಾಗಿದೆ ಎಂದು ಬಿಂಎಂಆರ್‌ಸಿಎಲ್ ಪ್ರಕಟಿಸಿದೆ.
ಬೆಳಗಿನ ಸಮಯದಲ್ಲಿ ಬೆಂಗಳೂರಿನ ಪಶ್ಚಿಮ ಭಾಗದಿಂದ ಕಚೇರಿಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ಪ್ರಯಾಣಿಕರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಂಎಂಆರ್‌ಸಿಎಲ್‌ನ ಅಧಿಕಾರಿಗಳು ಸಾರ್ವಜನಿಕರಿಗೆ ಶಾಂತವಾಗಿರಲು ಮನವಿ ಮಾಡಿದ್ದು, ರಕ್ಷಣಾ ಕಾರ್ಯ ಮುಗಿದ ನಂತರ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ತಿಳಿಸಿದ್ದಾರೆ.





