ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವತಿಯ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ. ಘಟನೆ ವೇಳೆ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವಕ ಮತ್ತು ಯುವತಿ ಪರಸ್ಪರ ಸ್ನೇಹಿತರಾಗಿದ್ದರು. ಪರಿಚಯದ ಬಳಿಕ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದು, ಪಾರ್ಟಿಗೂ ತೆರಳಿದ್ದರು ಎನ್ನಲಾಗಿದೆ. ಪಾರ್ಟಿ ಮುಗಿದ ಬಳಿಕ ಇಬ್ಬರೂ ಇಂದಿರಾನಗರದ ಮೆಟ್ರೋ ನಿಲ್ದಾಣದ ಸಮೀಪ ಬಂದಿದ್ದಾರೆ.
ಅಲ್ಲಿಂದ ಇಬ್ಬರೂ ಕ್ಯಾಬ್ ಬುಕ್ ಮಾಡಿಕೊಂಡು ತೆರಳಲು ಮುಂದಾಗಿದ್ದರು. ಕ್ಯಾಬ್ ಹತ್ತಿದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ ಎನ್ನಲಾಗಿದೆ. ಆರಂಭದಲ್ಲಿ ಮಾತಿನ ಮೂಲಕ ನಡೆದಿದ್ದ ವಾಗ್ವಾದದ ಬಳಿಕ ಯುವಕ ಮತ್ತು ಯುವತಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.
ಈ ವೇಳೆ ಯುವಕ ಯುವತಿಯನ್ನು ಕಾರಿನೊಳಗೆ ತಳ್ಳಿ, ಕಾಲಿನಿಂದ ಒದ್ದಿದ್ದಾನೆ. ಕ್ಯಾಬ್ನಲ್ಲೇ ಗಲಾಟೆ ತೀವ್ರಗೊಂಡಿದ್ದರಿಂದ ಚಾಲಕ ಆತಂಕಗೊಂಡಿದ್ದಾನೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಚಾಲಕ ಸ್ಥಳದಲ್ಲೇ ಕಾಯುತ್ತಿದ್ದ ಎನ್ನಲಾಗಿದೆ. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಯುವತಿ ಕ್ಯಾಬ್ನಿಂದ ಇಳಿದು, ಅಲ್ಲಿಂದ ಆಟೋವೊಂದನ್ನು ಹತ್ತಿಕೊಂಡು ತೆರಳಿದ್ದಾಳೆ. ಯುವತಿಗೆ ಹಲ್ಲೆ ನಡೆಸುವ ವೇಳೆ ಹಿಂಬದಿ ವಾಹನದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಇಂದಿರಾನಗರದ ಮೆಟ್ರೋ ನಿಲ್ದಾಣದ ಸಮೀಪ ನಡೆದಿರುವ ಈ ಘಟನೆ ನಡೆದಿದೆ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಇಬ್ಬರು ಪಾರ್ಟಿಗೆ ತೆರಳಿದ್ದು, ಬಳಿಕ ಯಾವ ಕಾರಣಕ್ಕೆ ಗಲಾಟೆ ಆರಂಭವಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುವಕ-ಯುವತಿ ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿತ್ತೇ ಅಥವಾ ಬೇರೆ ಯಾವುದಾದರೂ ಕಾರಣವಿತ್ತೇ ಎಂಬುದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕ್ಯಾಬ್ ಚಾಲಕ ನೀಡಿರುವ ಮಾಹಿತಿ ಹಾಗೂ ಘಟನೆಯ ಸುತ್ತಮುತ್ತಲಿನ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.





