ಬೆಂಗಳೂರು: ದೇಶದೆಲ್ಲೆಡೆ ಇಂಡಿಗೋ ವಿಮಾನ ಹಾರಾಟ ಕಳೆದ 5 ದಿನಗಳಿಂದ ವ್ಯತ್ಯಯ ಉಂಟಾಗಿದ್ದು, ಸಾವಿರಾರು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿವೆ. ಇದರ ಪರಿಣಾಮವಾಗಿ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಹಾಗೂ ಕೊಚ್ಚಿ ಸೇರಿದಂತೆ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಸಂಭವಿಸಿರುವ ತಾಂತ್ರಿಕ ಮತ್ತು ನಿರ್ವಹಣಾ ಸಮಸ್ಯೆಗಳ ಪರಿಣಾಮವಾಗಿ ಹಾರಾಟಗಳ ವೇಳಾಪಟ್ಟಿ ಬದಲಾಗಿದ್ದು, ನಿರ್ದಿಷ್ಟ ಮಾಹಿತಿ ಸಿಗದ ಕಾರಣ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿಯು ಮುಂದುವರಿದಿದೆ. ಈ ನಡುವೆ ವಿಮಾನ ಟಿಕೆಟ್ಗಳ ದರ ಗಗನಕ್ಕೇರಿದೆ.
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆ ಇತರೆ ಏರ್ಲೈನ್ ಸಂಸ್ಥೆಗಳು ಭಾರಿ ಪ್ರಮಾಣದಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿ ಲಾಭ ಪಡೆದುಕೊಳ್ಳುತ್ತಿವೆ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸೀಸನ್ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ದರ ಹೆಚ್ಚಳ ಕಾಣಿಸಿಕೊಳ್ಳುವುದು ಸಹಜ. ಆದರೆ ಈ ಬಾರಿ ದರ ಏರಿಕೆ ಪ್ರಮಾಣ ‘ಅತಿರೇಕ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ವಿಮಾನಯಾನ ಸಂಸ್ಥೆಗಳು ಏರ್ ಫೇರ್ ನಿಯಮಗಳನ್ನು ಉಲ್ಲಂಘಿಸಿ, ಸಾಮಾನ್ಯ ದರದ ಹತ್ತರಿಂದ ಹದಿನೈದು ಪಟ್ಟು ಹೆಚ್ಚಳ ಮಾಡಿವೆ. ಮಹಾನಗರಗಳಿಗೆ ಪ್ರಯಾಣಿಸುವ ವಿಮಾನಗಳ ಟಿಕೆಟ್ ದರದಲ್ಲಿ ₹5,000 ರಿಂದ ₹8,000ರವರೆಗೆ ಏರಿಕೆ ಕಂಡುಬಂದಿದೆ. ಹಲವು ಎಕಾನಮಿ ಕ್ಲಾಸ್ ಟಿಕೆಟ್ಗಳು ₹50,000 ರಿಂದ ₹80,000ರವರೆಗೆ ಏರಿಕೆಯಾಗಿದೆ.
ಬೆಂಗಳೂರು–ಮುಂಬೈ ಮಾರ್ಗದಲ್ಲಿ ಟಿಕೆಟ್ ದರಗಳು ₹25,000 ರಿಂದ ₹75,000ರವರೆಗೆ ಏರಿಕೆಯಾಗಿದೆ. ಇದೇ ರೀತಿಯಲ್ಲಿ ಬೆಂಗಳೂರು–ಕೊಚ್ಚಿ ಮಾರ್ಗದಲ್ಲಿ ₹18,000ರವರೆಗೆ ಹೆಚ್ಚಳ ದಾಖಲಾಗಿದೆ.
ಇನ್ನು ಇತರ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಹೆಚ್ಚಳ ಮಾಡಿ ಪ್ರಯಾಣಿಕರಿಂದ ವಸೂಲಿಗಿಳಿದಿದ್ದು, ತೀವ್ರ ಆಕ್ರೋಶ ಕಾರಣವಾಗಿದೆ. ಇಂಡಿಗೋ ಹಾರಾಟದಲ್ಲಿ ವ್ಯತ್ಯಯ ಇತರ ವಿಮಾನಗಳ ಟಿಕೆಟ್ ದರ ಭಾರಿ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ವಿಪಕ್ಷಗಳು ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತಿದೆ.
3ನೇ ದಿನವೂ ಇಂಡಿಗೋ ವಿಮಾನಯಾನದಲ್ಲಿ ಗೊಂದಲ: ಬೆಂಗಳೂರಿನಲ್ಲಿ 73 ವಿಮಾನ ರದ್ದು
ಬೆಂಗಳೂರು/ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ (IndiGo) ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ಗಂಭೀರ ಅಡಚಣೆಯು ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ. ತಾಂತ್ರಿಕ ದೋಷಗಳು, ಸಿಬ್ಬಂದಿ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ದೇಶಾದ್ಯಂತ ವಿಮಾನಗಳ ಹಾರಾಟ ರದ್ದಾಗಿದ್ದು, ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ (ಎರಡನೇ ದಿನ) ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.
ಇಂದಿಗೂ ಮುಂದುವರಿದ ರದ್ದತಿ: ದೇಶಾದ್ಯಂತ 100+ ವಿಮಾನಗಳ ಮೇಲೆ ಪರಿಣಾಮ ಈ ಸಮಸ್ಯೆ ಮೂರನೇ ದಿನವೂ ಮುಂದುವರಿಯುವ ಸಾಧ್ಯತೆಗಳಿದ್ದು, ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ಇಂದು ಕೂಡ ರದ್ದಾಗುವ ಭೀತಿ ಎದುರಾಗಿದೆ. ಇನ್ನು ಹಲವು ವಿಮಾನಗಳ ಹಾರಾಟದಲ್ಲಿ ಗಣನೀಯ ವಿಳಂಬ ಕಂಡುಬರುತ್ತಿದ್ದು, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ನಲ್ಲಿ ಭಾರೀ ವ್ಯತ್ಯಯ
ರಾಜಧಾನಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport – KIA) ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
-
ನಿನ್ನೆ (ಎರಡನೇ ದಿನ) ಬೆಂಗಳೂರಿನಿಂದ 43 ಇಂಡಿಗೋ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.
-
ಆದರೆ, ಇಂದು (ಮೂರನೇ ದಿನ) ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಒಟ್ಟು 73 ಇಂಡಿಗೋ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಇಂಡಿಗೋ ಪ್ರಯಾಣಿಕರು ತಮ್ಮ ಪ್ರವಾಸವನ್ನು ರದ್ದುಗೊಳಿಸುವುದು ಇಲ್ಲವೇ ಬೇರೆ ವಿಮಾನಯಾನ ಸಂಸ್ಥೆಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.
ಡಿಜಿಸಿಎಯಿಂದ ಇಂಡಿಗೋ ಅಧಿಕಾರಿಗಳಿಗೆ ಬುಲಾವ್
ಸತತ ವಿಮಾನಗಳ ರದ್ದತಿ ಮತ್ತು ವಿಳಂಬದಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಇಂಡಿಗೋ ಸಂಸ್ಥೆಗೆ ನೋಟಿಸ್ ನೀಡಿದೆ.
-
ವಿಮಾನಗಳ ವಿಳಂಬ ಮತ್ತು ರದ್ದತಿಗಳ ಹಿಂದಿನ ನಿಖರ ಕಾರಣಗಳನ್ನು ವಿವರಿಸುವಂತೆ ಡಿಜಿಸಿಎ ಸೂಚಿಸಿದೆ.
-
ಅಲ್ಲದೇ, ಪ್ರಯಾಣಿಕರ ಸಂಕಷ್ಟವನ್ನು ಪರಿಹರಿಸಲು ಮತ್ತು ಪರಿಸ್ಥಿತಿ ಸುಧಾರಿಸಲು ಸ್ಪಷ್ಟ ಯೋಜನೆಯನ್ನು ಒದಗಿಸುವಂತೆ ಇಂಡಿಗೋಗೆ ಆದೇಶಿಸಿದೆ.
-
ಈ ವಿಷಯದ ಬಗ್ಗೆ ಚರ್ಚಿಸಲು, ಡಿಜಿಸಿಎ ಇಂದು ಮಧ್ಯಾಹ್ನ ನಡೆಯಲಿರುವ ಉನ್ನತ ಮಟ್ಟದ ಸಭೆಗೆ ಇಂಡಿಗೋ ಅಧಿಕಾರಿಗಳಿಗೆ ತುರ್ತು ಬುಲಾವ್ ನೀಡಿದೆ.
48 ಗಂಟೆಗಳಲ್ಲಿ ಸುಧಾರಣೆಯ ಭರವಸೆ ನೀಡಿದ ಇಂಡಿಗೋ
ಸಂಸ್ಥೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಅಡಚಣೆಗಳ ಕುರಿತು ಇಂಡಿಗೋ ಸಂಸ್ಥೆಯು ಔಪಚಾರಿಕ ಪ್ರತಿಕ್ರಿಯೆ ನೀಡಿದೆ. ಸಂಸ್ಥೆಯು ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಕ್ಷಮೆಯಾಚಿಸುತ್ತೇವೆ. ಸಮಸ್ಯೆಯನ್ನು ಬಗೆಹರಿಸಿ, ಮುಂದಿನ 48 ಗಂಟೆಗಳೊಳಗೆ ಪರಿಸ್ಥಿತಿಯನ್ನು ಸುಧಾರಿಸುತ್ತೇವೆ ಎಂದು ಭರವಸೆ ನೀಡಿದೆ.
ಇಂಡಿಗೋ ನೀಡಿದ ಕಾರಣಗಳು:
ಇಂಡಿಗೋ ಸಂಸ್ಥೆಯು ವಿಮಾನ ಹಾರಾಟದ ಅಡಚಣೆಗೆ ಹಲವು ಅನಿರೀಕ್ಷಿತ ಕಾರ್ಯಾಚರಣೆಗಳನ್ನ ತಿಳಿಸಿವೆ ಅವುಗಳೆಂದರೆ:
-
ತಾಂತ್ರಿಕ ದೋಷಗಳು.
-
ಚಳಿಗಾಲದ ವೇಳಾಪಟ್ಟಿಯಲ್ಲಿನ ಹೊಂದಾಣಿಕೆಗಳು
-
ಹವಾಮಾನ ಪರಿಸ್ಥಿತಿ.
-
ವಿಮಾನ ನಿಲ್ದಾಣಗಳಲ್ಲಿನ ದಟ್ಟಣೆ
-
ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಹೊಸ ಅನುಷ್ಠಾನ
ಈ ಎಲ್ಲಾ ಕಾರಣಗಳಿಂದಾಗಿ ಸಿಬ್ಬಂದಿ ಲಭ್ಯತೆಗೆ ಅನುಗುಣವಾಗಿ ವಿಮಾನ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ತಾತ್ಕಾಲಿಕವಾಗಿ ಕೆಲ ವಿಮಾನಗಳ ವೇಳಾಪಟ್ಟಿ ಬದಲಾವಣೆ ಮತ್ತು ರದ್ದತಿ ಅನಿವಾರ್ಯವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.





