ಹುಬ್ಬಳ್ಳಿ : ಕೃತಕ ಬುದ್ಧಿಮತ್ತೆಯ ಪ್ರಸಕ್ತ ಕಾಲಘಟ್ಟದಲ್ಲಿ ಬಿಸಿಎ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಿದ್ದು, ಕೌಶಲ್ಯ, ಸೃಜನಶೀಲತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸ್ವರ್ಣ ಸಮೂಹದ ಚೇರಮನ್, ಹುಬ್ಬಳ್ಳಿಯ ಖ್ಯಾತ ಉದ್ಯಮಿ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ್ ಹೇಳಿದರು.
ಕೆ.ಎಲ್.ಇ ಸೊಸೈಟಿಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗ ಏರ್ಪಡಿಸಿದ ವಾರ್ಷಿಕ ರಾಷ್ಟ್ರೀಯ ಮಟ್ಟದ ಐಟಿ ಉತ್ಸವ “ಅಕ್ಯುಮೆನ್-2026” ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಉತ್ಸವಗಳಲ್ಲಿನ ಸಾಂಸ್ಕೃತಿಕ ಮತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಅನೇಕ ದೈತ್ಯ ಕಂಪನಿಗಳು ಉದ್ಯೋಗ ಕಡಿತಗೊಳಿಸುತ್ತಿದ್ದು ಹೊಸ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶದ ಅನ್ನದಾತರಿಗೆ ಅನುಕೂಲಕರವಾಗುವ ಯತ್ನ ಮಾಡಬೇಕು. ಉದ್ಯೋಗಿಯಾಗುವ ಬದಲು ನೀವೇ ಉದ್ಯೋಗ ಸೃಷ್ಟಿಸಿ ಎಂದು ಕಿವಿಮಾತು ಹೇಳಿದರು.
ವಿವಿಧ ಜಿಲ್ಲೆಗಳಿಂದ ಒಟ್ಟು 37 ಕಾಲೇಜುಗಳು, 400 ವಿದ್ಯಾರ್ಥಿಗಳು ಪಾಲ್ಗೊಂಡು ಹಲವಾರು ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ವಿಜೇತರಿಗೆ ಸ್ವರ್ಣ ಗ್ರೂಪ್ ಪ್ರಾಯೋಜಕತ್ವದ 5000 ರೂ ಮೌಲ್ಯದ ನಗದು ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲರಾದ ಡಾ.ಸಂಧ್ಯಾ ಕುಲಕರ್ಣಿ, ಬಿಸಿಎ ಸಂಯೋಜಕ ಸಿದ್ದಲಿಂಗಪ್ಪ, ಶಿವರಾಜ, ಪೂರ್ಣಿಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





