ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆರೋಗ್ಯ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷ ವಯಸ್ಸಿನ ಜನತಾ ದಳ ಅಧ್ಯಕ್ಷರ ಆರೋಗ್ಯದಲ್ಲಿ ಮಂಗಳವಾರ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಪ್ರಕಾರ, ದೇವೇಗೌಡರಿಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ವೈದ್ಯಕೀಯ ತಂಡವು ಅವರ ಆರೋಗ್ಯದ ಮೇಲೆ ಸತತ ನಿಗಾ ಇಟ್ಟಿದ್ದು, ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳು, “ಶ್ರೀ ದೇವೇಗೌಡರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಮತ್ತು ಮೇಲ್ವಿಚಾರಣೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ದೇವೇಗೌಡರು ಆಸ್ಪತ್ರೆಗೆ ದಾಖಲಾದ ತಕ್ಷಣ ಅವರ ಪುತ್ರ ಮಾಜಿ ಮಂತ್ರಿ ಹೆಚ್.ಡಿ. ರೇವಣ್ಣ ಆಸ್ಪತ್ರೆಗೆ ಹೋಗಿದ್ದರು. ತಂದೆಯ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದ ರೇವಣ್ಣ ಮಾಧ್ಯಮಗಳಿಗೆ ಯಾವುದೇ ವಿವರ ನೀಡದೆ ಹಿಂದಿರುಗಿದ್ದರು. ನಂತರ ಆಪ್ತ ವಲಯಗಳ ಮೂಲಕ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.
ಜೆಡಿಎಸ್ ಪಕ್ಷವು ತನ್ನ ಅಧಿಕೃತ ಎಕ್ಸ್’ ಖಾತೆಯ ಮೂಲಕ ದೇವೇಗೌಡರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿದೆ. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ ಪಕ್ಷ, ದೇವೇಗೌಡರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿತ್ತು.
92 ವರ್ಷ ವಯಸ್ಸಿನ ಹೆಚ್.ಡಿ. ದೇವೇಗೌಡರು ಇಂದಿಗೂ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವ್ಹೀಲ್ಚೇರ್ನಲ್ಲಿ ಕುಳಿತೇ ಜನರ ಸಮಸ್ಯೆಗಳನ್ನು ಆಲಿಸುವ ದೇವೇಗೌಡರು, ಇಳಿ ವಯಸ್ಸಿನಲ್ಲೂ ಪಕ್ಷದ ಮುಖ್ಯ ಕಾರ್ಯಕ್ರಮಗಳು ಮತ್ತು ಅಧಿವೇಶನಗಳಿಗೆ ನಿಯಮಿತವಾಗಿ ಹಾಜರಾಗುತ್ತಿರುವುದು ಗಮನಾರ್ಹ.