ಹಾಸನ: ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿರುವ 10ನೇ ದಿನವಾದ ಇಂದು ಭಾನುವಾರವೂ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ವಾರಾಂತ್ಯದ ರಜೆಯ ಹಿನ್ನೆಲೆ ದೇವಾಲಯದ ಆವರಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಬೆಳಗ್ಗಿನಿಂದಲೇ ಸರತಿ ಸಾಲುಗಳಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಇದರ ನಡುವೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಹೆಚ್ಡಿಕೆ ದಂಪತಿ ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ.
ಹಾಸನಾಂಬೆ ಸನ್ನಿಧಿಯಲ್ಲಿ ಹೆಚ್ಡಿಕೆ ದಂಪತಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಸ್ವರೂಪ್, ಮಾಜಿ ಸಚಿವ ಸಾ.ರಾ. ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಹಾಸನಾಂಬೆ ದೇವಿಯ ಸನ್ನಿಧಿಯಲ್ಲಿ ಹೆಚ್ಡಿಕೆ ದಂಪತಿ ಪರಸ್ಪರ ಹಾರ ಬದಲಿಸಿಕೊಂಡಿದ್ದು ವಿಶೇಷ ಗಮನ ಸೆಳೆದಿದೆ. ದೇಗುಲದ ಪವಿತ್ರ ವಾತಾವರಣದಲ್ಲಿ ದಂಪತಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ್ದಾರೆ.
ಹೆಚ್ಡಿಕೆ ದಂಪತಿಯ ದೇವಾಲಯ ಭೇಟಿಯ ವೇಳೆ ಅಭಿಮಾನಿಗಳು ಮತ್ತು ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಕೇಂದ್ರ ಸಚಿವರ ಭೇಟಿಯ ಹಿನ್ನೆಲೆ ದೇವಾಲಯದ ಸುತ್ತಮುತ್ತ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.
10ನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ
ಹಾಸನಾಂಬೆ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಭಾನುವಾರವಾಗಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದಾರೆ.
ಬೆಳಗ್ಗೆಯಿಂದಲೇ ದೇವಾಲಯದತ್ತ ಭಕ್ತರ ದಂಡು ಹರಿದುಬಂದಿದ್ದು, ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಕುಟುಂಬ ಸಮೇತ ಆಗಮಿಸುತ್ತಿರುವ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಹೀಗಾಗಿ ದರ್ಶನದ ದಿನಗಳಲ್ಲಿ ಹಾಸನ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದೇವಾಲಯದ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿದೆ.
ಕೆಲವೇ ಕ್ಷಣಗಳಲ್ಲಿ ಹಾಸನಾಂಬೆ ದರ್ಶನ ಪಡೆಯಲಿರುವ ಸಿಎಂ ಡಿಕೆಶಿ!
ಇನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಭೇಟಿಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕೆಲವೇ ಕ್ಷಣಗಳಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿಯ ದರ್ಶನ ಪಡೆಯಲಿದ್ದಾರೆ.
ಹಾಸನಾಂಬೆ ದೇವಿಯ ದರ್ಶನದ ಬಳಿಕ ಡಿ.ಕೆ. ಶಿವಕುಮಾರ್ ಅವರು ಹಾಸನ ತಾಲೂಕಿನ ಬೀಕನಹಳ್ಳಿಯಲ್ಲಿರುವ ಪುರದಮ್ಮ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುರದಮ್ಮ ದೇವಿಯ ಆಶೀರ್ವಾದ ಪಡೆಯಲಿದ್ದಾರೆ.





