ಹಾಸನ: ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಭೂ ಒತ್ತುವರಿ ಆರೋಪಕ್ಕೆ ಸಂಬಂದಿಸಿದಂತೆ ಈ ಪ್ರಕರಣದಲ್ಲಿ ಪರಸ್ಪರ ದೂರು–ಪ್ರತಿದೂರುಗಳು ದಾಖಲಾಗುವ ಮೂಲಕ ಭೂ ವಿವಾದ ಹೊಸ ತಿರುವು ಪಡೆದುಕೊಂಡಿದೆ. ವಿದ್ಯಾನಗರ ಪ್ರದೇಶದಲ್ಲಿರುವ ವೃದ್ಧೆ ಲಕ್ಷ್ಮಮ್ಮ ಅವರಿಗೆ ಸೇರಿದೆ ಎನ್ನಲಾಗುವ ಸೈಟ್‌ಗೆ ಸಂಬಂಧಿಸಿದಂತೆ ನಡೆದ ಈ ಘಟನೆ, ಇದೀಗ ಪೊಲೀಸ್ ತನಿಖೆಯ ಹಂತಕ್ಕೆ ತಲುಪಿದೆ.
ಪುಷ್ಪಾ ಪರವಾಗಿ ಅವರ ಮನೆಯ ಕೆಲಸಗಾರ ಹಾಗೂ ಸಂಬಂಧಿಕರಾಗಿರುವ ದುರ್ಗಾಪ್ರಸಾದ್ ಅವರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ನಿರ್ಮಾಪಕಿ ಪುಷ್ಪಾ ಅವರು ಬೆಂಗಳೂರಿನಲ್ಲಿ ಇದ್ದು, ಅವರ ಸೂಚನೆಯಂತೆ ದೂರು ದಾಖಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ವಿವಾದಿತ ಆಸ್ತಿಯೊಳಗಿನ ಕಾಂಪೌಂಡ್ ಹಾಗೂ ಶೆಡ್‌ಗಳನ್ನು ಜೆಸಿಬಿ ಬಳಸಿ ಅಕ್ರಮವಾಗಿ ತೆರವುಗೊಳಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾನುವಾರ ಬೆಳಗ್ಗೆ ವಿದ್ಯಾನಗರದಲ್ಲಿರುವ ಸೈಟ್‌ನಲ್ಲಿ ಲಕ್ಷ್ಮಮ್ಮ ಅವರ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಹೋಲ್ಡರ್ ದೇವರಾಜ್ ಅವರು ಜೆಸಿಬಿ ಬಳಸಿ ಕಾಂಪೌಂಡ್ ಹಾಗೂ ಶೆಡ್ ಅನ್ನು ತೆರವುಗೊಳಿಸಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿದ ವೇಳೆ, ದುರ್ಗಾಪ್ರಸಾದ್ ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೆಸಿಬಿ ಬಳಸಿ ಆಸ್ತಿಗೆ ಭಾರೀ ಹಾನಿ ಮಾಡಲಾಗಿದೆ ಎಂದು ಆರೋಪಿಸಿರುವ ದುರ್ಗಾಪ್ರಸಾದ್, ದೇವರಾಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಜೊತೆಗೆ, ನಿರ್ಮಾಪಕಿ ಪುಷ್ಪಾ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಇತ್ತ, ಜಿಪಿಎ ಹೋಲ್ಡರ್ ದೇವರಾಜ್ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಸೈಟ್‌ನಲ್ಲಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ವಾಸವಾಗಿರುವ ಲಕ್ಷ್ಮಮ್ಮ ಅವರು ತಮ್ಮ ಪರವಾಗಿ ಜಿಪಿಎ ನೀಡಿದ್ದು, ಅದರ ಆಧಾರದ ಮೇಲೆ ತೆರವು ಕಾರ್ಯ ನಡೆದಿದೆ ಎಂದು ದೇವರಾಜ್ ವಾದಿಸಿದ್ದಾರೆ.
ಆದರೆ, ಪುಷ್ಪಾ ಪರ ವಕೀಲ ಸಂಜಯ್ ಈ ವಾದವನ್ನು ತಳ್ಳಿಹಾಕಿದ್ದು, “ನ್ಯಾಯಾಲಯದಿಂದ ಇಂತಹ ಯಾವುದೇ ಆದೇಶವೇ ಇಲ್ಲ. ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗಲೇ ಅತಿಕ್ರಮಣ ಮಾಡಿ ಕಾಂಪೌಂಡ್ ಒಡೆಯಲಾಗಿದೆ. ಇದು ಸಂಪೂರ್ಣವಾಗಿ ಕಾನೂನು ವಿರೋಧಿ” ಎಂದು ಆರೋಪಿಸಿದ್ದಾರೆ.
ಪುಷ್ಪಾ ಕಡೆಯವರು ಮತ್ತೊಂದು ಪ್ರಮುಖ ಅಂಶವನ್ನು ಮುಂದಿಟ್ಟಿದ್ದು, ವಿವಾದಿತ ಆಸ್ತಿಯನ್ನು ಗಿರೀಶ್ ಎಂಬುವವರಿಂದ ಪುಷ್ಪಾ ಅವರು ಕಾನೂನಿನ ಪ್ರಕಾರ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಆಸ್ತಿಯ ಮಾಲೀಕತ್ವ ನಮ್ಮದೇ ಆಗಿದ್ದು, ಯಾವುದೇ ಒತ್ತುವರಿ ಎಂಬ ಪ್ರಶ್ನೆಯೇ ಇಲ್ಲ ಎಂದು ಅವರು ವಾದಿಸಿದ್ದಾರೆ.





