ಹಾಸನ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಧಿಕಾರಿ ಲತಾಕುಮಾರಿ ವಿರುದ್ಧ 75 ಲಕ್ಷ ರೂಪಾಯಿ ಲಂಚದ ಗಂಭೀರ ಆರೋಪ ಮಾಡಿದ್ದ ಕುಮಾರಸ್ವಾಮಿ ಅವರಿಗೆ ಡಿಸಿ ಈಗ ಮತ್ತೊಮ್ಮೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಸಿಂಹ ಮತ್ತು ನಾಯಿಗಳ ಚಿತ್ರವಿರುವ ಪೋಸ್ಟರ್ ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಲಂಚದ ಆರೋಪಕ್ಕೆ ಈಗಾಗಲೇ ಖಡಕ್ ಪ್ರತಿಕ್ರಿಯೆ ನೀಡಿದ್ದ ಲತಾಕುಮಾರಿ, ಇದೀಗ ಯಾರ ಹೆಸರನ್ನೂ ಉಲ್ಲೇಖಿಸದೆ ಹಾಕಿರುವ ಪೋಸ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ.
ಸಿಂಹ-ನಾಯಿ ಫೋಟೋ ಪೋಸ್ಟ್ ಮಾಡಿದ ಡಿಸಿ!
ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸಿಂಹವೊಂದು ಶಾಂತವಾಗಿ ಕುಳಿತಿದ್ದರೆ, ಅದರ ಸುತ್ತ ನಾಯಿಗಳು ಬೊಗಳುತ್ತಿರುವ ದೃಶ್ಯವಿದೆ.
ಈ ಫೋಟೋದ ಮೇಲೆ ಇಂಗ್ಲಿಷ್ನಲ್ಲಿ ‘NOT EVERY VOICE DESERVES A RESPONSE’ ಎಂಬ ವಾಕ್ಯವನ್ನು ಬರೆಯಲಾಗಿದೆ. ಅಂದರೆ, ‘ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ’ ಎಂಬ ಅರ್ಥ ನೀಡುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟರ್ ಇದೀಗ ವೈರಲ್ ಆಗಿದ್ದು, ಕುಮಾರಸ್ವಾಮಿ ಅವರ ಲಂಚದ ಆರೋಪಕ್ಕೆ ಡಿಸಿ ನೀಡಿರುವ ಪರೋಕ್ಷ ತಿರುಗೇಟು ಎಂದೇ ಹಲವರು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಪೋಸ್ಟ್ನಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಈ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ.
‘ಮೊದಲ ದಿನದಿಂದಲೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ’
ಇದಕ್ಕೂ ಮೊದಲು ತಮ್ಮ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ತಮ್ಮನ್ನು ಗುರಿಯಾಗಿಸಿಕೊಂಡು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದರು.
‘ನಾನು ಇಂತಹ ಆರೋಪಗಳು ಮತ್ತು ಬೆದರಿಕೆಗಳಿಗೆ ಹೆದರುವುದಿಲ್ಲ. ಆಡಳಿತ ಸೇವೆಗೆ ಬರುವ ಮುನ್ನವೇ ಇಂತಹ ಸವಾಲುಗಳನ್ನು ಎದುರಿಸಲು ತರಬೇತಿ ಪಡೆದಿರುತ್ತೇವೆ. ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು. ಮಹಿಳಾ ಅಧಿಕಾರಿಯ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರು ಇಂತಹ ಆರೋಪಗಳನ್ನು ನಂಬಬಾರದು’ ಎಂದು ಮನವಿ ಮಾಡಿದ್ದರು.
ಅಲ್ಲದೆ, ತಮ್ಮ ವಿರುದ್ಧ ನಡೆಯುತ್ತಿರುವ ಆರೋಪಗಳ ಕುರಿತು ಕಾನೂನು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದ್ದರು.
ಡಿಸಿ ಪಿಎ ಶಶಿಕಿರಣ್ನಿಂದ ಸೈಬರ್ ಕ್ರೈಂಗೆ ದೂರು
ಈ ವಿವಾದಕ್ಕೆ ಮತ್ತೊಂದು ತಿರುವು ನೀಡಿರುವುದು ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಶಶಿಕಿರಣ್ ನೀಡಿರುವ ದೂರು. ತಮ್ಮ ಮೊಬೈಲ್ ನಂಬರ್ ಮತ್ತು ಫೋಟೋವನ್ನು ಅನಧಿಕೃತವಾಗಿ ಬಳಸಿಕೊಂಡು ನಕಲಿ ವಾಟ್ಸಾಪ್ ಸಂದೇಶಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಾಟ್ಸಾಪ್ ಚಾಟ್ಗಳನ್ನು ತಾವು ಸೃಷ್ಟಿಸಿಲ್ಲ. ತಮ್ಮ ಮೊಬೈಲ್ನಿಂದ ಸಂದೇಶಗಳನ್ನು ಕಳುಹಿಸಿರುವಂತೆ ನಕಲಿ ಸಂಭಾಷಣೆಗಳನ್ನು ಸಿದ್ಧಪಡಿಸಿ ಹರಿಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದೇಶಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹಾಗೂ ತಹಶೀಲ್ದಾರ್ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ನಕಲಿ ಸಂದೇಶಗಳಿಂದ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಕುಟುಂಬ ಹಾಗೂ ಬಂಧು ಬಳಗದಲ್ಲಿಯೂ ಇದರಿಂದ ಅಸಮಾಧಾನ ಉಂಟಾಗಿದೆ. ಹೀಗಾಗಿ ಸಂದೇಶಗಳ ಮೂಲ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಹಾಸನದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
75 ಲಕ್ಷ ಲಂಚದ ಆರೋಪ ಮಾಡಿದ್ದ ಕುಮಾರಸ್ವಾಮಿ!
ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಲತಾಕುಮಾರಿ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು 75 ಲಕ್ಷ ರೂಪಾಯಿ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯ ಪಿಎ ಶಶಿಕಿರಣ್ ಅವರ ಮೊಬೈಲ್ನಲ್ಲಿದೆ ಎನ್ನಲಾದ ವಾಟ್ಸಾಪ್ ಚಾಟ್ಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು.





