ಹಾಸನ: ಹಾಸನಾಂಬೆ ದೇವಿಯ ವಾರ್ಷಿಕ ದರ್ಶನೋತ್ಸವದಲ್ಲಿ ಅಪರೂಪದ ಘಟನೆ ನಡೆದಿದೆ. ದೇವಾಲಯದ ಆವರಣದಲ್ಲಿ ಕಳೆದುಹೋಗಿದ್ದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪತ್ತೆಹಚ್ಚಿ, ಅದನ್ನು ಕಳೆದುಕೊಂಡ ಮಹಿಳೆಗೆ ಮರಳಿಸಿದ್ದಾರೆ.
ಮೈಸೂರಿನಿಂದ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ದೇವಿಯ ದರ್ಶನ ಪಡೆಯುವ ವೇಳೆ ತಮ್ಮ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ದೇವಾಲಯದ ಭೀಮನಕಟ್ಟೆ ಸುತ್ತಲೂ ಭಕ್ತರ ಗುಂಪಿನಲ್ಲಿ ಅವರ ಚಿನ್ನದ ಸರ ಕಳೆದುಹೋಯಿತು. ಇದು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಅತ್ಯಮೂಲ್ಯ ಆಭರಣವಾಗಿತ್ತು.
ಈ ಚಿನ್ನದ ಸರವನ್ನು ದೇವಾಲಯದ ಆವರಣದಲ್ಲಿ ದರ್ಶನಕ್ಕೆ ಬಂದಿದ್ದ ಮತ್ತೊಬ್ಬ ಭಕ್ತರಿಗೆ ಸಿಕ್ಕಿದೆ. ತಕ್ಷಣವೇ ಅವರು ಆ ಸರವನ್ನ ಸೌಟ್ಸ್ ಮತ್ತು ಗೈಡ್ಸ್ ಸೇವಾ ಕಾರ್ಯಕರ್ತರ ಮೂಲಕ ದೇವಾಲಯದ ಅಧಿಕಾರಿಗಳಿಗೆ ಚಿನ್ನದ ಸರವನ್ನು ಹಸ್ತಾಂತರಿಸಿದರು.
ದೇವಾಲಯದ ಅಧಿಕಾರಿಗಳು ಚಿನ್ನದ ಸರ ಕಳೆದುಕೊಂಡಿದ್ದ ಮೈಸೂರು ಮಹಿಳೆಯನ್ನು ಸಂಪರ್ಕಿಸಿ, ಗುರುತಿನ ಚೀಟಿ ಪರಿಶೀಲಿಸಿ ಅವರಿಗೆ ಆಭರಣವನ್ನು ಮರಳಿಸಲಾಯಿತು. ತಮ್ಮ ಚಿನ್ನದ ಸರ ಮರಳಿ ಸಿಕ್ಕಿದ್ದಕ್ಕೆ ಮಹಿಳೆ ಸಂತೋಷ ವ್ಯಕ್ತಪಡಿಸಿದರು. ಭಕ್ತರ ಈ ಪ್ರಾಮಾಣಿಕತೆಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಮಯದಲ್ಲಿ, ವಾರ್ಷಿಕ ಹಾಸನಾಂಬೆ ದರ್ಶನೋತ್ಸವದ 12ನೇ ದಿನವಾದ ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸಾಮಾನ್ಯವಾಗಿ ರಜಾ ದಿನಗಳು ಮತ್ತು ವಾರಾಂತ್ಯಗಳಲ್ಲಿ ತುಂಬಿ ತುಳುಕುತ್ತಿದ್ದ ಸರತಿ ಸಾಲುಗಳು, ಇಂದು ಬೆಳಗ್ಗೆ ಖಾಲಿ ಖಾಲಿಯಾಗಿ ಕಂಡುಬಂದವು. ಕಳೆದ 11 ದಿನಗಳವರೆಗೆ ದೀರ್ಘಾವಧಿಯವರೆಗೆ ಕಾದು ದರ್ಶನ ಪಡೆಯಬೇಕಿದ್ದ ಭಕ್ತರು, ಇಂದು ಕೇವಲ 30 ನಿಮಿಷಗಳಲ್ಲೇ ಧರ್ಮ ದರ್ಶನದ ಮೂಲಕ ದೇವಿ ದರ್ಶನ ಪಡೆಯಲು ಸಾಧ್ಯವಾಯಿತು.
ಭಕ್ತರ ಸಂಖ್ಯೆ ಇಳಿದಿರುವುದು, ಸ್ಥಳೀಯ ಪೊಲೀಸರು ಮತ್ತು ಆಡಳಿತ ಮಂಡಳಿಯ ಮೇಲಿನ ಒತ್ತಡವನ್ನು ಕೊಂಚ ತಗ್ಗಿಸಿದೆ. ಆದರೂ, ಜಿಲ್ಲಾಡಳಿತವು ದರ್ಶನೋತ್ಸವ ಮುಕ್ತಾಯಗೊಳ್ಳುವವರೆಗೂ ಎಲ್ಲ ರೀತಿಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ.