ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆ ದರ್ಶನಕ್ಕೆ ಮೊದಲ ದಿನವೇ ಭಕ್ತರ ಸಾಗರವೇ ಹರಿದುಬಂದಿದೆ. ಗುರುವಾರ (ಅ.29) ಮಧ್ಯಾಹ್ನ ದೇವಿಯ ಗರ್ಭಗುಡಿ ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಶುಕ್ರವಾರ ಮುಂಜಾನೆ 3 ಗಂಟೆಯಿಂದಲೇ ಸಾವಿರಾರು ಮಂದಿ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರೆತಿತ್ತು. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12:28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಅವರು ಸಂಪ್ರದಾಯದಂತೆ ಗೊನೆಯುಳ್ಳ ಬಾಳೆಕಂಬವನ್ನು ಕಡಿದ ಬಳಿಕ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಇದರೊಂದಿಗೆ ಪ್ರಸಿದ್ಧ ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.
ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ 300 ರೂಪಾಯಿ ಟಿಕೆಟ್ ಪಡೆದು ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಈ ಸಾಲು ಸುಮಾರು ಎರಡು ಕಿಲೋಮೀಟರ್ವರೆಗೆ ವಿಸ್ತರಿಸಿದೆ. ಮುಂಜಾನೆ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿ ಬರುವಿಕೆಗಾಗಿ ಕಾದು ನಿಂತಿದ್ದಾರೆ.
ಇನ್ನು 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ಗಾಗಿ ಇರುವ ಸಾಲು ಕೂಡ ಸಂಪೂರ್ಣ ಭರ್ತಿಯಾಗಿದೆ. ಗೋಲ್ಡ್ ಪಾಸ್ ಹೊಂದಿರುವ ಭಕ್ತರಿಗೆ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ಪ್ರೋಟೋಕಾಲ್ ಅಡಿಯಲ್ಲಿ ಬರುವ ಗಣ್ಯರು ಹಾಗೂ ವಿಐಪಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಧರ್ಮ ದರ್ಶನ, 1,000 ರೂಪಾಯಿ ಹಾಗೂ 300 ರೂಪಾಯಿ ವಿಶೇಷ ದರ್ಶನದ ಸರತಿ ಸಾಲುಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ನೂಕುನುಗ್ಗಲು, ಗೊಂದಲ ಅಥವಾ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸರತಿ ಸಾಲಿನ ವ್ಯವಸ್ಥೆ, ಭದ್ರತೆ ಹಾಗೂ ಭಕ್ತರ ಸಂಚಾರದ ಮೇಲೆ ನಿರಂತರ ನಿಗಾ ಇಡಲಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದರ್ಶನ ನೀಡುವುದರಿಂದ ಪ್ರತಿವರ್ಷವೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಾರೆ. ಈ ಬಾರಿಯೂ ಮೊದಲ ದಿನದಿಂದಲೇ ಭಕ್ತರ ಭಾರೀ ಸಂಖ್ಯೆಯು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.





