ಬೆಂಗಳೂರಲ್ಲಿ ಸೋಮವಾರ ಮುಂಜಾನೆ ನಡೆದಿರೋ ಕೊಲೆ ಕೇಸ್ ಅಶೋಕ ನಗರ ಜನರನ್ನ ಬೆಚ್ಚಿ ಬೀಳಿಸಿದೆ. ಕೊಲೆಯಾದ ವ್ಯಕ್ತಿ ಸಾಮಾನ್ಯದವನಲ್ಲ. ಹಾಲಿ ಎಂಎಲ್ಎ ಎನ್.ಎ.ಹ್ಯಾರಿಸ್ ಅತ್ಯಾಪ್ತನಾಗಿದ್ದ.
ಸೋಮವಾರ (24 ಫೆಬ್ರವರಿ) ಮುಂಜಾನೆ. ರಾಜ್ಯ ರಾಜಧಾನಿ ಬೆಂಗಳೂರಿನ ಜನ ವೀಕೆಂಡ್‌ನಲ್ಲಿ ಮೋಜು ಮಸ್ತಿ ಮುಗಿಸಿ, ಸೋಮವಾರ ಕೆಲಸಕ್ಕೆ ಹಾಜರಾಗೋ ಉಮೇದಿಯಲ್ಲಿ ಸಿಹಿ ನಿದ್ರೆಗೆ ಜಾರಿದ್ರು. ಇಂತಾ ಸಮಯದಲ್ಲಿ ಬೆಂಗಳೂರಿನ ಅಶೋಕ ನಗರದಲ್ಲಿ ಭೀಕರ ಕೊಲೆ ನಡೆದು ಹೋಗಿತ್ತು. ರೌಡಿ ಶೀಟರ್ ಒಬ್ಬನ ಮೇಲೆ ಮುಗಿಬಿದ್ದ ಹಂತಕರು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ರು.
ಕೊಲೆಯಾದ ವ್ಯಕ್ತಿಯ ಹೆಸರು ಹೈದರ್ ಆಲಿ. ಈತ ಭಾನುವಾರ ರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರೋ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೋಗಿ ಗೆಳೆಯರ ಜೊತೆ ಪಾರ್ಟಿ ಮಾಡಿದ್ದಾನಂತೆ. ಅಲ್ಲಿ ಪಾರ್ಟಿ ಮುಗಿಸಿ ಸ್ನೇಹಿತನ ಜೊತೆ ಅಶೋಕ ನಗರ ವ್ಯಾಪ್ತಿಯ ಆನೆಪಾಳ್ಯದಲ್ಲಿರೋ ತನ್ನ ಮನೆಗೆ ಹೋಗ್ತಿದ್ದ. ಗರುಡಾ ಮಾಲ್ ದಾಟಿ ಫುಟ್ಬಾಲ್ ಸ್ಟೇಡಿಯಂ ಬಳಿ ಬಂದಿದ್ದಾನೆ. ಈ ವೇಳೆ ಆತನ ಮೋಟೋ ಸ್ಕೂಟರ್‌ಗೆ ಕಾರೊಂದು ಅಡ್ಡ ಬಂದಿದ್ದು, ಕಾರು ಅಡ್ಡ ಬಂತು ಎಂದು ಆತನ ಸ್ನೇಹಿತ ಬ್ರೇಕ್ ಹಾಕಿದ್ದಾನೆ ಅಷ್ಟೇ.. ಆಮೇಲೆ ಆಗಿದ್ದೇ ಈತನ ಮರ್ಡರ್.
ಕಾರಿನಿಂದ ಇಳಿದ ಐದಾರು ಜನ ಇವರ ಸ್ಕೂಟರ್ ಫಾಲೋ ಮಾಡ್ಕೊಂಡು ಬಂದಿದ್ದಾರೆ. ನಂತರ ಇನ್ನಿಬ್ಬರು ಲಾಂಗ್-ಮಚ್ಚು-ತಲವಾರ್ ಹಿಡಿದುಕೊಂಡು ಬಂದು ಕೊಚ್ಚಿ ಕೊಂದು ಹಾಕಿದ್ದಾರೆ. ಹಂತಕರು ಅದ್ಯಾವ ಪರಿ ಅಟ್ಯಾಕ್ ಮಾಡಿದ್ದಾರೆ ಅನ್ನೋದಕ್ಕೆ ಪೋಸ್ಟ್ ಮಾರ್ಟಂ ರಿಪೋರ್ಟ್ ಸಾಕ್ಷಿಯಾಗಿದೆ. ಹೈದರ್ ಅಲಿಯನ್ನ 56 ಬಾರಿ ಕೊಚ್ಚಿ ಕೊಂದಿದ್ದಾರೆ ಅಂತಾ ವರದಿ ಹೇಳ್ತಿದೆ. ಕೊಚ್ಚಿರೋ ಭರಕ್ಕೆ ಆತನ ಮುಖವನ್ನೇ ಗುರುತಿಸಲಾಗ್ತಿಲ್ಲ. ಕೊಲೆ ನಡೆದ ಸ್ಥಳ ಅಶೋಕ ನಗರ ಸ್ಟೇಷನ್‌ನಿಂದ ಜಾಸ್ತಿ ದೂರ ಏನೂ ಇಲ್ಲ. ಹೀಗಾಗಿ ವಿಷಯ ತಿಳಿದ ತಕ್ಷಣ ಪೊಲೀಸರು ಬಂದಿದ್ದಾರೆ. ಅಷ್ಟರೊಳಗೆ ಹೈದರ್ ಅಲಿಯನ್ನ ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿಗೆ ಹೋಗೋ ವೇಳೆಗೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಈ ಕೊಲೆಯಾದ ಹೈದರ್ ಅಲಿ ಸಾಮಾನ್ಯ ವ್ಯಕ್ತಿಯೇನಲ್ಲ. ಅಶೋಕ ನಗರ ಸ್ಟೇಷನ್ ವ್ಯಾಪ್ತಿಯಲ್ಲಿ ರೌಡಿ ಶೀಟರ್. ಕೊಲೆ ಯತ್ನ.. ಹಲ್ಲೆ.. ಹಲ್ಲೆಗೆ ಯತ್ನ ಸೇರಿ ಮೈ ತುಂಬಾ ಕೇಸುಗಳನ್ನ ಹಾಕಿಸಿಕೊಂಡಿದ್ದ. ಪೊಲೀಸರು ನೀಡಿರೋ ಮಾಹಿತಿಯಂತೆ ಈತನ ವಿರುದ್ಧ ಸುಮಾರು 11 ಕೇಸುಗಳಿವೆ. 2014ರಲ್ಲಿ ಈತ ರೌಡಿಸಂಗೆ ಇಳಿದಿದ್ದ, ಈತನ ವಿರುದ್ಧ 2016ರಲ್ಲಿ ರೌಡಿ ಶೀಟ್ ಓಪನ್ ಆಗಿತ್ತು. ಈ ಹೈದರ್ ಅಲಿ ಶಾಂತಿ ನಗರದ ಹಾಲಿ ಶಾಸಕ ಎನ್.ಎ.ಹ್ಯಾರಿಸ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ. ಕಳೆದ ಚುನಾವಣೆಯಲ್ಲಿ ಹ್ಯಾರಿಸ್ ಪರ ಪ್ರಚಾರ ಕೂಡ ಮಾಡಿದ್ದ.
ಹೈದರ್ ಆಲಿ ಮೇಲೆ ಮೃಗಗಳಂತೆ ಮುಗಿ ಬಿದ್ದು ಕೊಚ್ಚಿ ಕೊಂದು ಪರಾರಿಯಾಗಿರೋದು ಯಾರು ಅಂತಾ ಇನ್ನೂ ಗೊತ್ತಾಗಿಲ್ಲ. ಪೊಲೀಸರು ವಿಶೇಷ ತಂಡಗಳನ್ನ ರಚಿಸಿ ಹಂತಕರ ಜಾಡು ಪತ್ತೆ ಹಚ್ಚೋ ಕಾರ್ಯ ಮಾಡ್ತಿದ್ದಾರೆ. ಆರಂಭದಲ್ಲಿ ಇದೊಂದು ಗ್ಯಾಂಗ್ ವಾರ್ ಆಗಿರಬಹುದು ಅಂತಾ ಪೊಲೀಸರು ಭಾವಿಸಿದ್ರು. ಆದ್ರೆ, ಈಗ ರಾಜಕೀಯ ಕಾರಣಕ್ಕೆ ಕೊಲೆ ಮಾಡಲಾಗಿದೆ ಅಂತಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ನಾಜ್ ಅನ್ನೋ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪ್ರಕರಣದ ವಿಚಾರಣೆ ನಡೆಸ್ತಿರೋ ಪೊಲೀಸರು ಹಂತಕರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ.