ಬೆಂಗಳೂರು, ಅಕ್ಟೋಬರ್ 21: ದೀಪಾವಳಿಯ ಎರಡನೇ ದಿನವಾದ ಬಲಿಪಾಡ್ಯಮಿ (ಅಕ್ಟೋಬರ್ 22) ಅಂದು ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಗೋಪೂಜೆ ನಿರ್ವಹಿಸಲು ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬಲಿಪಾಡ್ಯಮಿಯ ದಿನದಂದು ದೇವಾಲಯಗಳು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಈ ಪೂಜೆಯ ಭಾಗವಾಗಿ, ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯದ ಆವರಣಕ್ಕೆ ಕರೆತರಬೇಕು. ನಂತರ ಅರಿಶಿಣ, ಕುಂಕುಮ ಬಳಿದು ಹೂವುಗಳಿಂದ ಅಲಂಕರಿಸಬೇಕು. ಗೋವುಗಳಿಗೆ ಗೋಗ್ರಾಸ ವಾಗಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಸುಗಳನ್ನು ನೀಡುವಂತೆಯೂ ಸಚಿವರು ಆದೇಶಿಸಿದ್ದಾರೆ.
ಮುಜರಾಯಿ ಇಲಾಖೆಯು ರಾಜ್ಯದ ಸುಮಾರು 35,500 ದೇವಾಲಯಗಳ ನಿರ್ವಹಣೆ ಮತ್ತು ಆಡಳಿತದ ಮೇಲ್ವಿಚಾರಣೆ ನೋಡಿಕೊಳ್ಳುತ್ತದೆ. ಇತ್ತೀಚೆಗೆ, ದೇವಾಲಯದ ಆವರಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತಹ ಪರಿಸರ ಸ್ನೇಹಿ ನಿರ್ಣಯಗಳಿಗೆ ಇಲಾಖೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಂತಹ ಪ್ರಮುಖ ದೇಗುಲಗಳ ಆಡಳಿತವನ್ನು ವಹಿಸಿಕೊಳ್ಳುವ ಮೂಲಕ, ದೇವಾಲಯಗಳ ಸುವ್ಯವಸ್ಥಿತ ನಿರ್ವಹಣೆ ಮತ್ತು ಧಾರ್ಮಿಕ ಆಚರಣೆಗಳ ಸಂರಕ್ಷಣೆಗೆ ಇಲಾಖೆ ಶ್ರಮಿಸುತ್ತಿದೆ.
ಬಲಿಪಾಡ್ಯಮಿಯಂದು ಗೋಪೂಜೆಯನ್ನು ಕಡ್ಡಾಯಗೊಳಿಸುವ ಈ ನಿರ್ಣಯವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಸಕಾರಾತ್ಮಕವಾಗಿ ಸ್ವಾಗತಿಸಲಾಗಿದೆ. ಹಿಂದೂ ಧರ್ಮದಲ್ಲಿ ಗೋವನ್ನು ಪವಿತ್ರ ಪ್ರಾಣಿಯಾಗಿ ಪರಿಗಣಿಸಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಗೋವನ್ನು ಪೂಜಿಸುವುದು ಒಂದು ಪ್ರಾಚೀನ ಸಂಪ್ರದಾಯ.





