ಗದಗ: ಗದಗದ ಬೆಟಗೇರಿಯಲ್ಲಿ ಹಿಂದೂ ಯುವಕನೊಬ್ಬ ತನ್ನ ಧರ್ಮವನ್ನೇ ಬದಲಾಯಿಸಲು ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾನೆ. ವಿಶಾಲಕುಮಾರ್ ಎಂಬ ಯುವಕ, ತನ್ನ ಪತ್ನಿ ತಹಸೀನ್ ಹೊಸಮನಿ ಮತ್ತು ಆಕೆಯ ಕುಟುಂಬದವರ ವಿರುದ್ಧ ಬಲವಂತದ ಮತಾಂತರದ ಆರೋಪ ಮಾಡಿದ್ದಾನೆ. ಈ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಒತ್ತಾಯಿಸಿರುವ ವಿಶಾಲ್, ತನ್ನ ಮೇಲೆ ಮಾನಸಿಕ ಕಿರುಕುಳವೂ ಆಗಿದೆ ಎಂದು ದೂರಿದ್ದಾನೆ.
ವಿಶಾಲ್ ಮತ್ತು ತಹಸೀನ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಕುಟುಂಬದವರಿಂದ ಗುಪ್ತವಾಗಿಟ್ಟಿದ್ದ ಈ ಜೋಡಿ, 2024ರ ನವೆಂಬರ್ 26ರಂದು ರಿಜಿಸ್ಟರ್ ಮದುವೆ ಮಾಡಿಕೊಂಡಿತ್ತು. ಆದರೆ, ಈ ವಿಷಯ ತಹಸೀನ್ ಕುಟುಂಬಕ್ಕೆ ತಿಳಿಯಿತು. ತಕ್ಷಣವೇ ತಹಸೀನ್‌ನ ತಾಯಿ ಬೇಗಂ ಬಾನು, ಸೋದರ ಮಾವ ಇಬ್ರಾಹಿಂ ಖಾನ್, ಮತ್ತು ಇತರ ಕುಟುಂಬ ಸದಸ್ಯರು ವಿಶಾಲ್‌ನನ್ನು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಳ್ಳಲು ಒತ್ತಾಯಿಸಿದರು. ಪ್ರೀತಿಸಿದ ಯುವತಿಗಾಗಿ ವಿಶಾಲ್ ಒಪ್ಪಿಕೊಂಡು, 2025ರ ಏಪ್ರಿಲ್ 25ರಂದು ಮುಳಗುಂದ ನಾಕಾದ ಉಮರಬೀನ್ ಕತ್ತಾಬ ಮಸೀದಿಯಲ್ಲಿ ನಿಖಾ ನಡೆಸಿಕೊಂಡ.
ಆದರೆ, ಈ ನಿಖಾದಲ್ಲಿ ವಿಶಾಲ್‌ನ ಹೆಸರನ್ನು ಅವನಿಗೆ ತಿಳಿಯದಂತೆ ‘ವಿರಾಜ್ ಸಾಬ್’ ಎಂದು ಬದಲಾಯಿಸಲಾಗಿತ್ತು. ನಿಖಾ ದಾಖಲೆಯಲ್ಲಿ ಈ ಹೆಸರನ್ನು ಉರ್ದುವಿನಲ್ಲಿ ದಾಖಲಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಮದುವೆಗೂ ಮುನ್ನವೇ ವಿಶಾಲ್‌ನನ್ನು ಐದು ಬಾರಿ ನಮಾಜ್ ಮಾಡಲು ಮತ್ತು ಮುಸ್ಲಿಂ ಸಮಾಜದ ಜಮಾತ್‌ಗೆ ಹೋಗಲು ತಹಸೀನ್ ಕುಟುಂಬ ಒತ್ತಡ ಹೇರಿತ್ತು ಎಂದು ಆತ ದೂರಿದ್ದಾನೆ.
ನಿಖಾ ನಂತರ, ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ವಿಶಾಲ್‌ನ ಕುಟುಂಬಕ್ಕೆ ಈ ವಿಷಯ ತಿಳಿಯಿತು. ವಿಶಾಲ್‌ನ ಕುಟುಂಬವರು ಹಿಂದೂ ಸಂಪ್ರದಾಯದಂತ ಸಮಾರಂಭ ನಡೆಸಲು ಯೋಜನೆ ರೂಪಿಸಿದರು. ಜೂನ್ 5ರಂದು ಮದುವೆಗೆ ದಿನಾಂಕ ನಿಗದಿಯಾಯಿತು. ಆರಂಭದಲ್ಲಿ ಒಪ್ಪಿಗೆ ನೀಡಿದ್ದ ತಹಸೀನ್ ಕುಟುಂಬ, ನಂತರ ಹಿಂದೂ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಬದಲಿಗೆ, ವಿಶಾಲ್ ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಅನುಸರಿಸಬೇಕೆಂದು ಒತ್ತಡ ಹೇರಿದರು. ಇದಕ್ಕೆ ಒಪ್ಪದಿದ್ದಾಗ, ತಹಸೀನ್ ಡೈವರ್ಸ್‌ಗೆ ಮುಂದಾದಳು ಎಂದು ವಿಶಾಲ್ ಆರೋಪಿಸಿದ್ದಾನೆ.
ವಿಶಾಲ್‌ನ ಪ್ರಕಾರ, ತನ್ನ ಧರ್ಮವನ್ನು ಬಲವಂತವಾಗಿ ಬದಲಾಯಿಸಲು ಯತ್ನಿಸಲಾಗಿದೆ. ಇದರಿಂದ ಮಾನಸಿಕ ಕಿರುಕುಳವೂ ಉಂಟಾಗಿದೆ ಎಂದು ಆತ ದೂರಿದ್ದಾನೆ. ಈ ಬಗ್ಗೆ ಗದಗ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಬಲವಂತದ ಮತಾಂತರ ಮತ್ತು ಕಿರುಕುಳದ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ವಿಶಾಲ್ ಮನವಿ ಮಾಡಿದ್ದಾನೆ.





