ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳತ್ತ ಹೆಜ್ಜೆ ಇಡುತ್ತಿದೆ. ಪಾದಚಾರಿ ಮಾರ್ಗಗಳಲ್ಲಿ (Footpath) ಮೋಟಾರು ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ, ಫುಟ್‌ಪಾತ್‌ನಲ್ಲಿ ಬೈಕ್ ಅಥವಾ ಇತರೆ ವಾಹನಗಳನ್ನು ಚಲಾಯಿಸುವವರಿಗೆ ವಿಧಿಸಲಾಗುತ್ತಿರುವ ಪ್ರಸ್ತುತ ₹500 ದಂಡವನ್ನು ₹5,000ಕ್ಕೆ ಏರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬುಧವಾರ ಬೆಂಗಳೂರು ನಗರ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಸಚಿವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಆದರೆ, ಒತ್ತುವರಿ ತೆರವುಗೊಂಡ ಫುಟ್‌ಪಾತ್‌ಗಳನ್ನು ಇದೀಗ ಕೆಲ ವಾಹನ ಸವಾರರು ಸಂಚಾರಕ್ಕೆ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪಾದಚಾರಿಗಳ ಸುರಕ್ಷತೆಗೆ ಮೀಸಲಾಗಿರುವ ಮಾರ್ಗಗಳಲ್ಲಿ ವಾಹನ ಸಂಚಾರ ನಡೆಯುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರ ಪ್ರಕಾರ, ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ. ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸುವ ಹಕ್ಕು ಸಂವಿಧಾನಬದ್ಧವಾಗಿದ್ದು, ಅದನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆ, ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ದಂಡದ ಮೊತ್ತ ಹೆಚ್ಚಾದರೆ ಮಾತ್ರ ನಿಯಮ ಪಾಲನೆಗೆ ಜನರು ಗಂಭೀರತೆ ತೋರುತ್ತಾರೆ. ಹೀಗಾಗಿ, ಪ್ರಸ್ತುತ ಇರುವ ₹500 ದಂಡವನ್ನು ₹5,000ಕ್ಕೆ ಹೆಚ್ಚಿಸುವಂತೆ ಸಾರಿಗೆ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆಯುವುದಾಗಿ ಸಚಿವರು ತಿಳಿಸಿದ್ದಾರೆ.
ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್ ನಿಯಮ ಕಟ್ಟುನಿಟ್ಟಾಗಿ ಜಾರಿ
ಸಭೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಅನಗತ್ಯ ಪಾರ್ಕಿಂಗ್ ಟ್ರಾಫಿಕ್ ದಟ್ಟಣೆಗೆ ಪ್ರಮುಖ ಕಾರಣವಾಗಿದ್ದು, ಸಾಧ್ಯವಾದಷ್ಟು ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಪ್ರಸ್ತುತ ಬೆಂಗಳೂರು ನಗರದಲ್ಲಿ ಕೆಲವು ರಸ್ತೆಗಳಲ್ಲಿ ‘ಆಲ್ಟರ್ನೇಟ್ ಪಾರ್ಕಿಂಗ್’ ಹಾಗೂ ‘ಒನ್-ಸೈಡ್ ಪಾರ್ಕಿಂಗ್’ ವ್ಯವಸ್ಥೆ ಜಾರಿಯಲ್ಲಿದ್ದರೂ, ವಾಹನ ಸವಾರರು ಅದನ್ನು ಪಾಲಿಸುತ್ತಿಲ್ಲ. ಪರಿಣಾಮವಾಗಿ ರಸ್ತೆ ಎರಡೂ ಬದಿಗಳಲ್ಲೂ ವಾಹನ ನಿಲುಗಡೆ ಆಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಪ್ರತಿದಿನ ಕನಿಷ್ಠ 7 ರಿಂದ 8 ಅಡಿ ರಸ್ತೆ ಜಾಗ ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ವಾಹನ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜನರಲ್ಲಿ ಅರಿವು ಮೂಡಿಸುವುದು ಅಗತ್ಯ
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕೇವಲ ರಸ್ತೆ ವಿಸ್ತರಣೆ ಅಥವಾ ಮೂಲಸೌಕರ್ಯ ಅಭಿವೃದ್ಧಿ ಸಾಕಾಗುವುದಿಲ್ಲ ಎಂದು ಸಚಿವರು ಹೇಳಿದರು. ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಸಾರ್ವಜನಿಕರು ನಿಯಮ ಪಾಲಿಸದಿದ್ದರೆ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸಿಗ್ನಲ್‌ಗಳ ಬಳಿ ಬಸ್ ನಿಲ್ದಾಣ ಬೇಡ
ನಗರದ ಸಿಗ್ನಲ್ ಹಾಗೂ ಜಂಕ್ಷನ್‌ಗಳ ಸಮೀಪ ಬಸ್ ನಿಲ್ದಾಣಗಳಿರುವುದರಿಂದ ವಾಹನ ದಟ್ಟಣೆ ಹೆಚ್ಚುತ್ತಿದೆ ಎಂಬ ಅಭಿಪ್ರಾಯವನ್ನೂ ಸಚಿವರು ವ್ಯಕ್ತಪಡಿಸಿದರು.
ಸಿಗ್ನಲ್‌ಗಳಿಂದ ಸುಮಾರು 750 ಮೀಟರ್ ಹಾಗೂ ಪ್ರಮುಖ ಜಂಕ್ಷನ್‌ಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣಗಳಿರಬಾರದು. ಈಗಿರುವ ಬಸ್ ನಿಲ್ದಾಣಗಳನ್ನು ಹಂತ ಹಂತವಾಗಿ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೆ, ಸಿಗ್ನಲ್‌ಗಳ ಬಳಿ ಬಿಎಂಟಿಸಿ ಬಸ್ ಸೇರಿದಂತೆ ಯಾವುದೇ ವಾಹನಗಳು ಅನಗತ್ಯವಾಗಿ ನಿಲ್ಲದಂತೆ ಟ್ರಾಫಿಕ್ ಪೊಲೀಸರು ನಿಗಾ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರಾದ ಲತಾ ಆರ್, ಲೋಖಂಡೆ ಸ್ನೇಹಲ್ ಸುಧಾಕರ್, ಕವಿತಾ ರಾಜಾರಾಂ, ವೆಂಕಟಾ ಚಲಪತಿ, ನವೀನ್ ಕುಮಾರ್ ರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಎಂಜಿನಿಯರ್‌ಗಳು ಭಾಗವಹಿಸಿದ್ದರು.





