ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಜೂನ್ 19,) ಪತ್ನಿಯೊಂದಿಗೆ ಆಂಧ್ರಪ್ರದೇಶದ ತಿರುಪತಿ-ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಳಗಿನ ಜಾವವೇ ದೇವಸ್ಥಾನಕ್ಕೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ದರ್ಶನದ ನಂತರ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಸಂದೇಶವೊಂದನ್ನೂ ಪ್ರಕಟಿಸಿದ್ದಾರೆ.
“ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಧರ್ಮಪತ್ನಿಯೊಂದಿಗೆ ಭೇಟಿ ನೀಡಿ ದಿವ್ಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹ ಎಲ್ಲರ ಮೇಲಿರಲಿ, ರಾಜ್ಯ ಸಮೃದ್ಧಿಯಾಗಲಿ” ಎಂದು ಅವರು ಹೇಳಿದ್ದಾರೆ.
ಇದು ಮೊದಲ ಬಾರಿ ಮಾತ್ರವಲ್ಲ, ಡಿ.ಕೆ ಶಿವಕುಮಾರ್ ಅವರು ಈ ಹಿಂದೆ ಸಹ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ ಅವರು ನಗರ ದೇವತೆ ಅಣ್ಣಮ್ಮ ದೇವಿ ಸನ್ನಿಧಾನಕ್ಕೂ ಭೇಟಿ ನೀಡಿ ಹರಕೆ ತೀರಿಸಿದ್ದರು. ಮುಖ್ಯಮಂತ್ರಿ ಆಗಿದ್ದರೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಬಂದು ಹರಕೆ ತೀರಿಸುವುದಾಗಿ ಅವರು ಮೊದಲು ನೀಡಿದ್ದ ವಾಗ್ದಾನವನ್ನು ಅವರು ನುಡಿದಂತೆ ನಡೆದುಕೊಂಡು ಪೂರೈಸಿದ್ದರು.
ಈ ಭೇಟಿಯು ರಾಜ್ಯದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ನಡೆದಿರುವುದು ರಾಜಕೀಯವಾಗಿ ವಿಶೇಷ ಮಹತ್ವ ಪಡೆದಿದೆ. ನಿನ್ನೆ (ಜೂನ್ 18,) ಪ್ರಕಟವಾದ ಫಲಿತಾಂಶದಲ್ಲಿ ಒಟ್ಟು ಏಳು ಸ್ಥಾನಗಳ ಪೈಕಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರತಿಪಕ್ಷ ಭಾರತೀಯ ಜನತಾ ಪಕ್ಷ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ, ತಿಪ್ಪಣ್ಣಪ್ಪ ಕಾಮಕನೂರ್ ಮತ್ತು ವಿನಯ್ ಕಾರ್ತಿಕ್ ಸೇರಿದಂತೆ ಐವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪರವಾಗಿ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ವಿಧಾನ ಪರಿಷತ್ ಪ್ರವೇಶ ಪಡೆದಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದಾರೆ.
ಈ ಚುನಾವಣೆಯಲ್ಲಿ ಹಲವು ಕಡೆ ಅಡ್ಡಮತದಾನ ನಡೆದಿದೆ ಎಂಬ ಆರೋಪಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ. ಮತ್ತೊಂದೆಡೆ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಒಳಗಿನ ಅಡ್ಡಮತದಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ದ್ರೋಹ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಚುನಾವಣೆಯ ಫಲಿತಾಂಶವು ತಮಗೆ ಒಂದು ಹೊಸ ಅನುಭವ ನೀಡಿದೆ ಎಂದು ಹೇಳಿದ ಕುಮಾರಸ್ವಾಮಿ, ಅತಿಯಾಗಿ ಯಾರನ್ನೂ ನಂಬಬಾರದು ಎಂಬ ಪಾಠವನ್ನು ಈ ಚುನಾವಣೆ ಕಲಿಸಿದೆ. ರಾಜಕೀಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ ಎಂಬ ಅರಿವು ಮತ್ತಷ್ಟು ದೃಢವಾಗಿದೆ ಎಂದರು.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಉಂಟಾದ ಕ್ರಾಸ್ ವೋಟ್ ವಿವಾದವು ಜೆಡಿಎಸ್ ಒಳಗಿನ ಅಸಮಾಧಾನ ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.





