ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ವಿರುದ್ಧ ಬುಧವಾರ ತೀಕ್ಷ್ಣವಾದ ವಾಗ್ದಾಳಿ ನಡೆಸಿದ್ದಾರೆ. “ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ನಡೆದಿದೆ ಎನ್ನುವವರು ಲೋಕಾಯುಕ್ತಕ್ಕೆ ದೂರು ನೀಡಲಿ” ಎಂದು ಆಗ್ರಹಿಸಿದ್ದಾರೆ.
‘ನೀಲಿ ದಳ’ (ಬ್ಲೂ ಫೋರ್ಸ್) ಮತ್ತು ರೋಬೋಟಿಕ್ ತಂತ್ರಜ್ಞಾನ ಬಳಕೆಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರ ವಿರುದ್ಧ ಗುಡುಗಿದರು. “ಜೆಡಿಎಸ್ ಅಧಿಕಾರದಲ್ಲಿದ್ದಾಗ ತುಂಗಭದ್ರಾ ಅಣೆಕಟ್ಟಿನ ಗೇಟ್‌ಗಳು ಕಿತ್ತು ಹೋಗಿದ್ದವು. ಆದರೆ ನಮ್ಮ ಸರ್ಕಾರ ಬಂದ ಒಂದೇ ವಾರದಲ್ಲಿ ಆ ಗೇಟ್‌ಗಳನನ್ನು ಸರಿ ಮಾಡಿಸಿ, ರೈತರಿಗೆ ನೀರು ತಲುಪಿಸಿದೆ. ಜೆಡಿಎಸ್‌ಗೆ ಏನೂ ಮಾಡಲು ಬರುತ್ತಿರಲಿಲ್ಲ. ಈಗ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಈಗ ಯಾಕೆ ಪ್ರತಿಭಟನೆ? ಮೊದಲು ಕೇಂದ್ರ ಸರ್ಕಾರದ ಬಳಿ ಹೋಗಿ, ಕರ್ನಾಟಕದ ಯೋಜನೆಗಳಿಗೆ ಅನುಮೋದನೆ ತಂದುಕೊಳ್ಳಲಿ. ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ, ಅಗತ್ಯ ಅನುದಾನ ತಂದುಕೊಳ್ಳಲಿ. ನಮ್ಮ ಪಾಲಿನ 28-30 ಟಿಎಂಸಿ ತುಂಗಭದ್ರಾ ನೀರು ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಆ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಭೆಗೆ ಬರುತ್ತಿಲ್ಲ. ಮೊದಲು ಅವರಿಂದ ಒಪ್ಪಿಗೆ ಪಡೆಯಲಿ” ಎಂದು ಸವಾಲು ಎಸೆದರು.
ಕುಮಾರಸ್ವಾಮಿ ಅವರನ್ನು ಜೊತೆ ಕರೆದುಕೊಂಡು ಚಂದ್ರಬಾಬು ಭೇಟಿಗೆ ಹೋಗುವ ಬಗ್ಗೆ ಕೇಳಿದಾಗ, “ನಾನು ಸಂಪೂರ್ಣ ಸಿದ್ಧನಿದ್ದೇನೆ. ಹೆಚ್‌ಡಿ ಕುಮಾರಸ್ವಾಮಿ ಅವರೇ ಸಮಯ ನಿಗದಿ ಮಾಡಲಿ, ನಾನು ಜೊತೆಗೆ ಬರುತ್ತೇನೆ” ಎಂದು ಉತ್ತರಿಸಿದರು.
ಬಿಬಿಎಂಪಿ ಕಸ ಗುಡಿಸುವ ರೋಬೋಟಿಕ್ ಯಂತ್ರಗಳ ಬಾಡಿಗೆ ಒಪ್ಪಂದದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, “ಈ ಆರೋಪ ಮಾಡುತ್ತಿರುವ ಶೋಭಾ ಕರಂದ್ಲಾಜೆ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಥವಾ ಯಾವುದೇ ತನಿಖಾ ಸಂಸ್ಥೆಗೆ ದೂರು ನೀಡಲಿ. ನಾನು ಕೇಂದ್ರ ಸಚಿವೆ ಶೋಭಾ ಅವರಿಗೆ ಉತ್ತರಿಸುತ್ತೇನೆ, ಆತನಿಗಲ್ಲ” ಎಂದು ತಿಳಿಸಿದರು.
“ಈ ಯೋಜನೆ ಕೇವಲ ಒಂದು ವರ್ಷದ್ದಲ್ಲ, ಏಳು ವರ್ಷಗಳ ದೀರ್ಘಾವಧಿಯ ಯೋಜನೆ. ಯಾವುದೇ ಅಕ್ರಮ ನಡೆದಿಲ್ಲ. ಆದರೆ ತನಿಖೆಗೆ ನಾವು ಸಂಪೂರ್ಣ ಸಿದ್ಧರಿದ್ದೇವೆ. ಶೋಭಾ ಅವರ ಟೀಕೆಗಳನ್ನು ಸ್ವಾಗತಿಸುತ್ತೇನೆ. ಅವರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡುವಂತೆ ಸೂಚಿಸುತ್ತೇನೆ. ಈ ಒಪ್ಪಂದ ಪಾರದರ್ಶಕವಾಗಿದೆ. ಮೊತ್ತ ದೊಡ್ಡದಾಗಿ ಕಾಣುತ್ತದೆ ಎಂಬುದು ನಿಜ. ಆದರೆ ಇದು ಕೇವಲ ವಾಹನದ ಖರ್ಚಲ್ಲ. ಚಾಲಕ, ಸಹಾಯಕ, ಸ್ವಚ್ಛತಾ ಸಿಬ್ಬಂದಿ, ನಿರ್ವಹಣೆ, ಇಂಧನ ಸೇರಿದಂತೆ ಎಲ್ಲ ಆಯಾಮಗಳನ್ನೂ ಪರಿಗಣಿಸಿ ಸರ್ಕಾರ ತೀರ್ಮಾನ ಕೈಗೊಂಡಿದೆ” ಎಂದು ಸ್ಪಷ್ಟಪಡಿಸಿದರು.





