ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರವು ಒಂಭತ್ತು ಸಂಘಟನೆಗಳ ಪ್ರತಿಭಟನೆಗಳ ಸವಾಲನ್ನು ಎದುರಿಸುತ್ತಿದೆ. ಇದರ ಜೊತೆಗೆ, ವಿರೋಧ ಪಕ್ಷವಾದ ಬಿಜೆಪಿ (BJP) ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಬಿಜೆಪಿ ನಾಯಕರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವಿಪಕ್ಷಗಳ ಈ ಪ್ರತಿಭಟನೆಗಳ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಈ ಬೆಳವಣಿಗೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹೋರಾಟ ಮಾಡುವ ಬದಲು, ರೈತರ ಸಮಸ್ಯೆಗಳಿಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಚಳಿಗಾಲದ ಅಧಿವೇಶನ ಆರಂಭವಾಗಿರುವ ಈ ಸಂದರ್ಭದಲ್ಲಿ ರೈತರ ಹೋರಾಟವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿರುವ ಬಿಜೆಪಿಯ ಕ್ರಮವನ್ನು ಡಿಸಿಎಂ ಖಂಡಿಸಿದರು. ರೈತರಿಗೆ ಮೋಸ ಮಾಡುತ್ತಿರುವುದು ಕೇಂದ್ರ ಸರಕಾರ. ರಾಜ್ಯದ ಅನ್ನದಾತರು ಎದುರಿಸುತ್ತಿರುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಪರಿಹಾರ ನೀಡದಿರುವುದು ಕೇಂದ್ರದ ನೀತಿಗಳೇ ಕಾರಣ ಎಂದು ಡಿ.ಕೆ. ಶಿವಕುಮಾರ್ ನೇರ ವಾಗ್ದಾಳಿ ನಡೆಸಿದರು.
ರೈತರ ಬೆಳೆಗಳ ಖರೀದಿ ಕುರಿತು ಮಾತನಾಡಿದ ಅವರು, ಕೇಂದ್ರ ಸರಕಾರವು ರೈತರ ಬೆಳೆಗಳನ್ನು ಸರಿಯಾದ ರೀತಿಯಲ್ಲಿ ಖರೀದಿ ಮಾಡುತ್ತಿಲ್ಲ. ರಾಜ್ಯದ ರೈತರ ಹಿತಾಸಕ್ತಿ ನಿಜವಾಗಿಯೂ ಬಿಜೆಪಿಯವರಿಗೆ ಮುಖ್ಯವಾಗಿದ್ದರೆ, ಅವರು ತಕ್ಷಣವೇ ತಮ್ಮದೇ ಪಕ್ಷದ ನಾಯಕರಾದ ಪ್ರಧಾನಿ ಮತ್ತು ಸಂಬಂಧಿತ ಕೇಂದ್ರ ಸಚಿವರ ಮೇಲೆ ಖರೀದಿ ಮಾಡುವಂತೆ ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ರಾಜ್ಯ ಸರ್ಕಾರವು ರೈತರಿಗೆ ಪರಿಹಾರ ನೀಡಲು ಮುಂದಾದಾಗ, ಕೇಂದ್ರದಿಂದ ಬರಬೇಕಾದ ಅನುದಾನದ ಕುರಿತು ಪ್ರಸ್ತಾಪಿಸಿದರು. ಕೇಂದ್ರ ಸರಕಾರ ರಾಜ್ಯಕ್ಕೆ ಕೊಡಬೇಕಿರುವ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನವನ್ನು ತಡಮಾಡದೇ ಬಿಡುಗಡೆಗೊಳಿಸಲಿ. ಆಗ ರೈತರ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಅವರು ಆಗ್ರಹಿಸಿದರು.
ಬಿಜೆಪಿ ಪ್ರತಿಭಟನೆಯ ಆಧಾರವು ದುರ್ಬಲವಾಗಿದೆ ಎಂದು ಪ್ರತಿಪಾದಿಸಿದ ಡಿಸಿಎಂ, ರಾಜ್ಯ ಸರ್ಕಾರವು ರೈತರ ಪರವಾಗಿ ನಿಂತಿದೆ ಎಂದು ಸಮರ್ಥಿಸಿಕೊಂಡರು. ನಾವು ರೈತರ ಪರವಾಗಿ ಇದ್ದೇವೆ. ಕಬ್ಬು, ಮೆಕ್ಕೆಜೋಳದ ಖರೀದಿ ಪ್ರಕ್ರಿಯೆಯನ್ನು ರಾಜ್ಯ ಸರಕಾರವೇ ಆರಂಭ ಮಾಡಿದೆ. ನಾವು ಇಂತಿಷ್ಟು ಬೆಳೆಗಳನ್ನು ಖರೀದಿ ಮಾಡಬೇಕು ಎಂದು ಈಗಾಗಲೇ ಆದೇಶವನ್ನು ಹೊರಡಿಸಿದ್ದೇವೆ ಎಂದು ತಿಳಿಸಿದರು.
ಆದರೆ, ಇಲ್ಲಿನ ಮೂಲಭೂತ ಸಮಸ್ಯೆ ಎಂದರೆ ಎಂ.ಆರ್.ಪಿ (MRP) ಬೆಲೆಯನ್ನು ನಿಗದಿಪಡಿಸುವುದು ಕೇಂದ್ರ ಸರಕಾರ. ಕನಿಷ್ಠ ಬೆಂಬಲ ಬೆಲೆ (Minimum Support Price – MSP) ಮತ್ತು ಮಾರುಕಟ್ಟೆ ನಿಯಂತ್ರಣವು ಹೆಚ್ಚಾಗಿ ಕೇಂದ್ರದ ನೀತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಬಿಜೆಪಿಯವರು ಹೋರಾಟ ಮಾಡಬೇಕಾಗಿದ್ದು ನಮ್ಮ ರಾಜ್ಯ ಸರ್ಕಾರದ ವಿರುದ್ಧವಲ್ಲ, ಕೇಂದ್ರ ಸರಕಾರದ ವಿರುದ್ಧ ಎಂದು ಡಿಕೆಶಿ ಟಾಂಗ್ ಕೊಟ್ಟರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯತ್ತ ಗುಡುಗುತ್ತಾ, ವಿಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ರೈತರ ಸಮಸ್ಯೆಗಳನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು. ರೈತರಿಗೆ ಅನ್ಯಾಯ ಮಾಡುತ್ತಿರುವುದು ಕೇಂದ್ರ ಸರ್ಕಾರದ ನೀತಿಗಳು ಮತ್ತು ಅನುದಾನ ಬಿಡುಗಡೆ ಮಾಡದಿರುವ ನಿರ್ಧಾರಗಳು. ಹೀಗಾಗಿ, ಬಿಜೆಪಿಯವರು ನಿಜವಾದ ಕಾಳಜಿ ಇದ್ದರೆ ರೈತರಿಗೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲಿ, ನಮ್ಮ ವಿರುದ್ಧ, ರಾಜ್ಯ ಸರ್ಕಾರದ ವಿರುದ್ಧ ಹೋರಾಡುವುದಲ್ಲ ಎಂದು ಹೇಳಿದರು.
ಅವರ ಈ ಹೇಳಿಕೆಗಳು ಬೆಳಗಾವಿ ಅಧಿವೇಶನದ ಎರಡನೇ ದಿನದಲ್ಲಿ ರಾಜಕೀಯ ಜಿದ್ದಾಜಿದ್ದಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಧಿವೇಶನದ ಮುಂದಿನ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರೈತರ ಸಮಸ್ಯೆಗಳ ಕುರಿತು ತೀವ್ರ ಚರ್ಚೆ ಮತ್ತು ವಾಗ್ವಾದ ನಡೆಯುವ ಸಾಧ್ಯತೆ ಇದೆ.





