ಮಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಪಾತ್ರಧಾರಿ, ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ. ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿದ್ದ ಚಿನ್ನಯ್ಯ, ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲು ಯಾರು ಬರದ ಕಾರಣ ಚಿನ್ನಯ್ಯ ಜೈಲಿನಲ್ಲೆ ಇದ್ದರು. ಆದರೆ ಇಂದು (ಡಿ.17) ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಹೊರಬಂದಿದ್ದಾರೆ.
ನವೆಂಬರ್ 24 ರಂದೇ ಬೆಳ್ತಂಗಡಿ ನ್ಯಾಯಾಲಯವು ಚಿನ್ನಯ್ಯನಿಗೆ 12 ಕಠಿಣ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. 1 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಆರ್ಥಿಕ ಮುಗ್ಗಟ್ಟು ಮತ್ತು ಇತರೆ ಕಾರಣದ ಭೀತಿಯಿಂದಾಗಿ ಯಾರೂ ಶ್ಯೂರಿಟಿ ನೀಡಲು ಮುಂದೆ ಬಂದಿರಲಿಲ್ಲ. ಇದರಿಂದಾಗಿ ಜಾಮೀನು ಸಿಕ್ಕರೂ ಚಿನ್ನಯ್ಯ ಕಳೆದ 23 ದಿನಗಳಿಂದ ಶಿವಮೊಗ್ಗ ಜೈಲಿನಲ್ಲೇ ಇದ್ದರು.
ಕೊನೆಗೆ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ನ್ಯಾಯಾಲಯಕ್ಕೆ ಇಂದು ಶ್ಯೂರಿಟಿಗಾಗಿ ಒಬ್ಬರನ್ನ ಹಾಗೂ ಇಬ್ಬರು ಜಾಮೀನುದಾರರನ್ನ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ದಾಖಲೆಗಳನ್ನು ಪರಿಶೀಲಿಸಿ ಬಿಡುಗಡೆಗೆ ಆದೇಶ ನೀಡುತ್ತಿದ್ದಂತೆಯೇ, ಕುಟುಂಬಸ್ಥರು ಕೋರ್ಟ್ ಆದೇಶದ ಪ್ರತಿ ಹಿಡಿದು ಶಿವಮೊಗ್ಗ ಜೈಲಿನತ್ತ ಧಾವಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಆಗಸ್ಟ್ 23 ರಂದು ಸುದೀರ್ಘ ವಿಚಾರಣೆಯ ಬಳಿಕ ಪೊಲೀಸರು ಚಿನ್ನಯ್ಯನನ್ನು ಬಂಧಿಸಿದ್ದರು. ಧರ್ಮಸ್ಥಳದಲ್ಲಿ ಅನಾಮಿಕನಾಗಿ ಕಾಣಿಸಿಕೊಂಡು, ಧರ್ಮಸ್ಥಳದ ಕೆಲ ಜಾಗಗಳಲ್ಲಿ ನಾನೆ ಶವಗಳನ್ನ ಹೂತಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ.ಚಿನ್ನಯ್ಯನ ಹೇಳಿಕೆಯನ್ನ ಪರಿಗಣಿಸಿ, ರಾಜ್ಯ ಸರ್ಕಾರ ಈ ಸಂಬಂಧ ಎಸ್‌ಐಟಿ ತಂಡ ರಚಿಸಿ ತನಿಖೆ ಪ್ರಾರಂಭಿಸಿತ್ತು. ಆದರೆ ಚಿನ್ನಯ್ಯ ತೋರಿಸಿದ ಯಾವ ಜಾಗದಲ್ಲೂ ಯಾವ ಬುರುಡೆಯೂ ಸಿಗಲಿಲ್ಲ ಕಾಲಕ್ರಮೇಣ ಇದು ಸುಳ್ಳು ಆರೋಪ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು ಬಳಿಕ ಪೊಲೀಸರು ಸೆಪ್ಟೆಂಬರ್ 6 ರಂದು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಬುರುಡೆ ಗ್ಯಾಂಗ್‌ಗೆ ಶುರುವಾಯ್ತಾ ಆತಂಕ ?
ಚಿನ್ನಯ್ಯನ ಬಂಧನದ ನಂತರ ಆತನನ್ನು ಬಳಸಿಕೊಂಡಿದ್ದ ‘ಬುರುಡೆ ಗ್ಯಾಂಗ್’ ಆತನಿಂದ ಅಂತರ ಕಾಯ್ದುಕೊಂಡಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾಗುತ್ತಿರುವುದು ಈ ಗ್ಯಾಂಗ್‌ನಲ್ಲಿ ನಡುಕ ಹುಟ್ಟಿಸಿದೆ. ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದ ಚಿನ್ನಯ್ಯ, ಹೊರಬಂದ ಬಳಿಕ ಈ ಪ್ರಕರಣದ ಹಿಂದೆ ಇರುವ ನಿಜವಾದ ಸೂತ್ರಧಾರಿಗಳ ಬಗ್ಗೆ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸುತ್ತಾರೆಯೇ ಎಂದು ಕಾದುನೋಡಬೇಕಿದೆ.
ಕೋರ್ಟ್ ವಿಧಿಸಿರುವ 12 ಷರತ್ತುಗಳನ್ನು ಚಿನ್ನಯ್ಯ ಪಾಲಿಸಬೇಕಿದೆ. ತನಿಖೆಗೆ ಸಹಕರಿಸುವುದು ಮತ್ತು ಸಾಕ್ಷ್ಯ ನಾಶಪಡಿಸದಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸದ್ಯಕ್ಕೆ ತನ್ನ ಕುಟುಂಬದೊಂದಿಗೆ ಸೇರಿಕೊಳ್ಳಲಿರುವ ಚಿನ್ನಯ್ಯ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟವನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.





