ಹಾಸನ, ಅ. 15: ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಈ ಐತಿಹಾಸಿಕ ಜಾತ್ರೆಯ ಸಂದರ್ಭದಲ್ಲಿ ಸಿಎಂ ಅವರು ಹಾಸನಾಂಬಾ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ರಾಜ್ಯಕ್ಕೆ ಸುಭಿಕ್ಷ, ಶಾಂತಿ, ನೆಮ್ಮದಿಯ ಆಶೀರ್ವಾದಕ್ಕಾಗಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರೆಯ ಯಶಸ್ಸಿಗೆ ಎಲ್ಲ ಪಕ್ಷಗಳ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಹಾಸನಾಂಬೆ ಜಾತ್ರೆಯು ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದು. ಲಕ್ಷಾಂತರ ಭಕ್ತರು ಒಂದುಗೂಡಿ ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ವರ್ಷವೂ ಜಾತ್ರೆಯಲ್ಲಿ ಯಾವುದೇ VIP ಸಂಸ್ಕೃತಿಗೆ ಮಣೆ ಹಾಕದೆ, ಶ್ರೀಸಾಮಾನ್ಯರ ದರ್ಶನಕ್ಕೆ ಆದ್ಯತೆ ನೀಡುವ ನಮ್ಮ ಸರ್ಕಾರದ ಪ್ರಯತ್ನವು ಯಶಸ್ವಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. “ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸಾರ್ವಜನಿಕರ ಸಹಕಾರದಿಂದ ಈ ಜಾತ್ರೆ ಸುಗಮವಾಗಿ ನಡೆಯಿತು. ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ಅವರು ತಿಳಿಸಿದರು.
ಇಂದು ಐತಿಹಾಸಿಕ ಹಾಸನಾಂಬಾ ದೇವಿಯ ಉತ್ಸವದಲ್ಲಿ ಪಾಲ್ಗೊಂಡು, ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆ.
ಹಾಸನಾಂಬೆಯ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲಿರಲಿ, ಎಲ್ಲರ ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ಚಿರಕಾಲ ನೆಲೆಸಲಿ ಎಂದು ಈ ವೇಳೆ ಪ್ರಾರ್ಥಿಸಿದೆ. pic.twitter.com/QjEASRg1mw— Siddaramaiah (@siddaramaiah) October 15, 2025
“ನಾನು ಕಳೆದ ವರ್ಷವೂ ಇಲ್ಲಿ ಬಂದು ದೇವರ ದರ್ಶನ ಪಡೆದಿದ್ದೆ. ಈ ವರ್ಷವೂ ಮತ್ತೊಮ್ಮೆ ದರ್ಶನ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷ, ಶಾಂತಿ, ನೆಮ್ಮದಿಗಾಗಿ ಮತ್ತು ಮಳೆ-ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಿದ ಸಿಎಂ, ಈ ಬಾರಿಯ ಅಗತ್ಯಕ್ಕಿಂತ ಹೆಚ್ಚು ಮಳೆಯಿಂದ ರೈತರಿಗೆ ಉಂಟಾದ ನಷ್ಟದ ಬಗ್ಗೆ ವಿವರಿಸಿದರು. “ಈ ವರ್ಷ ಅತಿಯಾದ ಮಳೆಯಿಂದ ಬೆಳೆ ಹಾನಿ ಉಂಟಾಗಿದೆ. ಎನ್‌ಆರ್‌ಎಫ್ ನಿಧಿಯ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ. ಹಿಂದಿನ ಯಾವ ಸರ್ಕಾರವೂ ನೀಡದಷ್ಟು ಬೆಳೆ ಹಾನಿ ಪರಿಹಾರವನ್ನು ನಾವು ಘೋಷಿಸಿದ್ದೇವೆ. ಈಗಾಗಲೇ ಲಕ್ಷಾಂತರ ರೈತರಿಗೆ ಪರಿಹಾರ ವಿತರಣೆ ಆರಂಭವಾಗಿದ್ದು, ಎಲ್ಲರಿಗೂ ತ್ವರಿತವಾಗಿ ತಲುಪುವಂತೆ ಉತ್ತೇಜನೆ ನೀಡಿದ್ದೇವೆ” ಎಂದು ಅವರು ತಿಳಿಸಿದರು.
ರೈತರ ಸಮೃದ್ಧಿಯನ್ನು ಖಚಿತಪಡಿಸಲು ಸರ್ಕಾರದ ಯೋಜನೆಗಳನ್ನು ವಿವರಿಸಿದ ಸಿಎಂ, “ಮುಂದಿನ ವರ್ಷಗಳಲ್ಲಿ ಇಂತಹ ಬೆಳೆ ಹಾನಿ ಪರಿಸ್ಥಿತಿ ಬಾರದಿರಲಿ ಎಂದು ಹಾಸನಾಂಬಾ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದೇನೆ ಎಂದರು.