ಬೆಂಗಳೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಭಾರತದ ಸಂವಿಧಾನ ಜಾರಿಗೆ ಬಂದು 76 ವರ್ಷಗಳು ಪೂರ್ಣಗೊಂಡಿದ್ದು, ಇಂದು 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ರಾಜ್ಯದ ಜನರಿಗೆ ಶುಭಕೋರಿದ್ದಾರೆ.
ಸಂವಿಧಾನದ ಮೂಲ ಆಶಯವೇ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಖಾತರಿಪಡಿಸುವುದು. ಇದು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಬೀಜಾಂಕುರವಿತ್ತು. ಬಸವಣ್ಣನವರ ನೇತೃತ್ವದ ಶರಣ ಚಳವಳಿ ಮತ್ತು ಕೂಡಲಸಂಗಮದ ಅನುಭವ ಮಂಟಪವು ಪ್ರಪಂಚಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿತ್ತು. ಇಲ್ಲಿ ಸಮಾಜದ ಕೆಳಸ್ತರದವರೂ ಚರ್ಚೆಯಲ್ಲಿ ಸಮಾನ ಅವಕಾಶ ಪಡೆದಿದ್ದರು. ಇದು ಇಂದಿನ ಪ್ರಜಾಪ್ರಭುತ್ವದ ಅಡಿಗಲ್ಲು.
ಸಾಂಪ್ರದಾಯಿಕ ಸಮಾಜದಲ್ಲಿ ಅಲಿಖಿತ ಸಂವಿಧಾನವೊಂದು ಇತ್ತು-ಜಾತಿ, ಲಿಂಗ ಆಧಾರದಲ್ಲಿ ಅಸಮಾನತೆಯನ್ನು ಒಪ್ಪಿಕೊಂಡಿದ್ದು. ಶೂದ್ರರು, ಮಹಿಳೆಯರು, ಅಸ್ಪೃಶ್ಯರು ಸಂಪತ್ತು, ಜ್ಞಾನ ಮತ್ತು ಘನತೆಯ ಹಕ್ಕಿನಿಂದ ವಂಚಿತರಾಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಮನುಷ್ಯವಿರೋಧಿ ವ್ಯವಸ್ಥೆಯನ್ನು ತಿರಸ್ಕರಿಸಿ, ಹೊಸ ಸಂವಿಧಾನವನ್ನು ರಚಿಸಿ ದೇಶಕ್ಕೆ ಅರ್ಪಿಸಿದರು. ಇದು ಆಧುನಿಕ ಪ್ರಜಾಪ್ರಭುತ್ವದ ಹುಟ್ಟಿಗೆ ಕಾರಣವಾಯಿತು.
ಸಂವಿಧಾನದ ಪ್ರಕಾರ ಎಲ್ಲರೂ ಅಭಿವೃದ್ಧಿಯ ಫಲ ಪಡೆಯಬೇಕು. ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯನ್ನು ಒಡೆದು, ಸಮಾನತೆಯ ಆಧಾರದಲ್ಲಿ ಸಮಾಜ ಪುನರ್ರಚನೆ ಮಾಡಬೇಕು. ನಾಗರಿಕನ ಸ್ಥಾನಮಾನ ಅವನ ಸಾಧನೆಯಿಂದ ನಿರ್ಣಯವಾಗಬೇಕೇ ಹೊರತು ಹುಟ್ಟು ಅಥವಾ ಜಾತಿಯಿಂದಲ್ಲ.
ಅಂಬೇಡ್ಕರ್ ಅವರ ಸಂವಿಧಾನ ಅರ್ಪಣೆಯಾಗಿ ಎರಡು ಜವಾಬ್ದಾರಿಗಳನ್ನು ಒತ್ತಿ ಹೇಳಿದ ಅವರು, ರಾಜಕೀಯ ಪ್ರಜಾಪ್ರಭುತ್ವ ರಕ್ಷಣೆ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸಾಧನೆ. ರಾಜಕೀಯ ಜನತಂತ್ರದೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಜನತಂತ್ರವನ್ನು ಬಲಪಡಿಸಬೇಕು. ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆ ಸಾಧಿಸಿ ದೇಶವನ್ನು ಸದೃಢಗೊಳಿಸಬೇಕು.
ನಮ್ಮ ಸರ್ಕಾರ ಸಂವಿಧಾನದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಡತನ, ಅನಾರೋಗ್ಯ, ಅನಕ್ಷರತೆ, ಅಪೌಷ್ಟಿಕತೆ ನಿವಾರಣೆ ಮಾಡಿ ಹಸಿವು-ಭಯ-ಅನಾರೋಗ್ಯ ಮುಕ್ತ ಸಮಾಜ ನಿರ್ಮಾಣವೇ ಗುರಿ. ಸಂವಿಧಾನದ 39, 15(3), 47 ಪರಿಚ್ಛೇದಗಳು ಜೀವನ ಹಕ್ಕು, ಮಹಿಳೆಯರ-ಮಕ್ಕಳ ಸಂರಕ್ಷಣೆ, ಪೌಷ್ಟಿಕತೆ-ಆರೋಗ್ಯ ಅಭಿವೃದ್ಧಿಯನ್ನು ಒತ್ತಾಯಿಸುತ್ತವೆ.
ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅನ್ನಭಾಗ್ಯದಿಂದ ಆಹಾರ ಭದ್ರತೆ, ಗೃಹಜ್ಯೋತಿಯಿಂದ ಇಂಧನ ಖಾತರಿ, ಗೃಹಲಕ್ಷ್ಮಿಯಿಂದ ಮಹಿಳೆಯರಿಗೆ ಮಾಸಿಕ 2000 ರೂ., ಶಕ್ತಿಯಿಂದ ಉಚಿತ ಪ್ರಯಾಣ, ಯುವನಿಧಿಯಿಂದ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇದರಿಂದ ಹಿಂದುಳಿದ ಕುಟುಂಬಗಳು ತಿಂಗಳಿಗೆ 5-6 ಸಾವಿರ ರೂ. ಉಳಿತಾಯ ಕಾಣುತ್ತಿವೆ, ಮಧ್ಯಮ ವರ್ಗಕ್ಕೆ 25-30 ಸಾವಿರ ರೂ. ವಾರ್ಷಿಕ ಉಳಿತಾಯವಾಗುತ್ತಿದೆ. ಇದು ಶಿಕ್ಷಣ, ಆರೋಗ್ಯಕ್ಕೆ ಬಳಕೆಯಾಗುತ್ತಿದ್ದು, ಸಮಾಜದಲ್ಲಿ ಭದ್ರತೆಯ ಭಾವನೆ ಮೂಡಿದೆ.
ಸಂವಿಧಾನವನ್ನು ವಿರೋಧಿಸುವವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧರು. ಅವರು ಬಡವರು, ರೈತರು, ಕಾರ್ಮಿಕರು, ದಲಿತರ ಪರ ಕಾನೂನುಗಳನ್ನು ವಿರೋಧಿಸುತ್ತಾರೆ. ಸಂವಿಧಾನವನ್ನು ದುರ್ಬಲಗೊಳಿಸುವ ಸಂಚುಗಳ ಬಗ್ಗೆ ಎಚ್ಚರ ವಹಿಸಬೇಕು. ಸಂವಿಧಾನ ರಕ್ಷಣೆಯೇ ದೇಶ ರಕ್ಷಣೆ.
ಸರ್ಕಾರದ ಎಲ್ಲ ಯೋಜನೆಗಳ ಹಿಂದಿನ ಗುರಿ ಸಮಸಮಾಜ ನಿರ್ಮಾಣ. ಸರ್ವರಿಗೂ ಸಮಪಾಲು, ಸಮಬಾಳು. ಈ ಪ್ರಯತ್ನಕ್ಕೆ ಜನರ ಬೆಂಬಲ ಕೋರುತ್ತೇನೆ ಎಂದು ಮುಖ್ಯಮಂತ್ರಿ ಸಂದೇಶ ನೀಡಿದ್ದಾರೆ.





