ಬೆಂಗಳೂರು: ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ರಾತ್ರಿ ವಿನೂತನ ರೀತಿಯಲ್ಲಿ ಬಿಎಂಟಿಸಿ (BMTC) ಬಸ್‌ಗಳಲ್ಲಿ ದಿಢೀರ್ ರಿಯಾಲಿಟಿ ಚೆಕ್ ನಡೆಸಿದರು. ಯಾವುದೇ ಅಧಿಕೃತ ಪ್ರೋಟೋಕಾಲ್ ಅಥವಾ ಭದ್ರತಾ ಸಿಬ್ಬಂದಿಯಿಲ್ಲದೆ, ಸಾಮಾನ್ಯ ಪ್ರಯಾಣಿಕರಂತೆ ಮಾಸ್ಕ್ ಧರಿಸಿ ಸುಮಾರು ಎರಡು ಗಂಟೆಗಳ ಕಾಲ ವಿವಿಧ ಮಾರ್ಗಗಳ ಬಸ್‌ಗಳಲ್ಲಿ ಸಂಚರಿಸಿ, ಪ್ರಯಾಣಿಕರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಸ್ವತಃ ಗಮನಿಸಿದರು.
ರಾತ್ರಿ ಸುಮಾರು 7.10ರಿಂದ 9.10ರವರೆಗೆ ನಡೆದ ಈ ಪರಿಶೀಲನೆಯಲ್ಲಿ ಜಯಮಹಲ್, ಟಿವಿ ಟವರ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ, ಭೂಪಸಂದ್ರ, ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಹೆಣ್ಣೂರು, ಹೆಣ್ಣೂರು ಬಂಡೆ, ಬೈರತಿ ಬಂಡೆ ಹಾಗೂ ಗೆದ್ಲಹಳ್ಳಿ ಸೇರಿದಂತೆ ಹಲವು ಮಾರ್ಗಗಳಲ್ಲಿ ಸಚಿವರು 10ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರಯಾಣಿಸಿದರು.
ಮಾಸ್ಕ್ ಧರಿಸಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು, ಚಾಲಕರು ಅಥವಾ ಕಂಡಕ್ಟರ್‌ಗಳಿಗೆ ಅವರು ಸಚಿವರು ಎಂಬುದು ಗೊತ್ತಾಗಲಿಲ್ಲ. ಪ್ರತಿಯೊಂದು ಬಸ್‌ಗೆ ನಿಯಮಾನುಸಾರ ಟಿಕೆಟ್ ಪಡೆದು ಹಣ ಪಾವತಿಸಿದ ಸಚಿವರು, ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿ ಬಸ್ ಸೇವೆಯ ಗುಣಮಟ್ಟ, ಸಮಯ ಪಾಲನೆ, ಸಿಬ್ಬಂದಿಯ ವರ್ತನೆ ಹಾಗೂ ಇತರೆ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಪರಿಶೀಲನೆ ವೇಳೆ ಕೆಲವು ಗಂಭೀರ ಲೋಪಗಳು ಬೆಳಕಿಗೆ ಬಂದವು. ಜಯಮಹಲ್‌ನಿಂದ ಸಂಚರಿಸುತ್ತಿದ್ದ KA-57 F-3372 ಸಂಖ್ಯೆಯ ಬಸ್ ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಕೈ ತೋರಿಸಿದ್ದ ಪ್ರಯಾಣಿಕರನ್ನು ಏರಿಸದೇ ಮುಂದುವರಿದಿರುವುದು ಸಚಿವರ ಗಮನಕ್ಕೆ ಬಂತು. ಈ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಬಂಧಿತ ಚಾಲಕ ಮುಸ್ತಾಕ್ ಹಾಗೂ ಕಂಡಕ್ಟರ್ ದಯಾನಂದ್ ವಿರುದ್ಧ ಅಮಾನತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೊಂದು ಘಟನೆಯಲ್ಲಿ, ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ತೆರಳುವ ಬಸ್‌ನಲ್ಲಿ ಸಚಿವರು ಎರಡು ಟಿಕೆಟ್‌ಗಳಿಗೆ ₹100 ನೋಟು ನೀಡಿದಾಗ, ಕಂಡಕ್ಟರ್ ಬಳಿ ಚಿಲ್ಲರೆ ಇಲ್ಲವೆಂದು ಹೇಳಿ, “ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗಿಳಿಯಿರಿ” ಎಂದು ಸೂಚಿಸಿದ. ಯಾವುದೇ ವಾದವಿವಾದಕ್ಕೆ ಇಳಿಯದೆ ಸಚಿವರು ಬಸ್‌ನಿಂದ ಇಳಿದರು.
ಪರಿಶೀಲನೆಯ ಭಾಗವಾಗಿ ಸಚಿವರು ಆಟೋದಲ್ಲಿಯೂ ಪ್ರಯಾಣಿಸಿದರು. ಸುಮಾರು ಒಂದು ಕಿಲೋಮೀಟರ್ ಪ್ರಯಾಣದ ಬಳಿಕ ಆಟೋ ಮೀಟರ್‌ನಲ್ಲಿ ₹30 ತೋರಿಸಿದ್ದರೂ ಚಾಲಕ ₹36 ನೀಡುವಂತೆ ಕೇಳಿದ. ಹೆಚ್ಚುವರಿ ಹಣ ಕೇಳಿದ ಕಾರಣವನ್ನು ಸಚಿವರು ಪ್ರಶ್ನಿಸಿದಾಗ, ಮೀಟರ್ ದೋಷವಿದೆ ಎಂದು ಚಾಲಕ ಸಮರ್ಥಿಸಿಕೊಂಡ. ಕೊನೆಗೆ ಸಚಿವರು ₹40 ನೀಡಿ ಅಲ್ಲಿಂದ ತೆರಳಿದರು.
ಈ ರಿಯಾಲಿಟಿ ಚೆಕ್ ವೇಳೆ ಹಲವು ಪ್ರಯಾಣಿಕರು ಬಸ್‌ಗಳ ವಿಳಂಬ, ಟಿಕೆಟ್ ವಿತರಣೆ, ಚಿಲ್ಲರೆ ಸಮಸ್ಯೆ, ಸಿಬ್ಬಂದಿಯ ವರ್ತನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಸಚಿವರು ಎಲ್ಲ ದೂರುಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ ವಿವಿಧ ಬಸ್ ಡಿಪೊಗಳಲ್ಲಿಯೂ ಪರಿಶೀಲನೆ ನಡೆಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯನಿರ್ವಹಣೆಯ ಮಾಹಿತಿ ಪಡೆದರು. ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ಕಂಡುಬಂದ ಕೆಲವು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದರು.





