ಮಂಡ್ಯ: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ಖಂಡಿಸಿದ ಅವರು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ “ಬಿಜೆಪಿ ನಾಯಕರಿಗೆ ಕೆಲಸವಿಲ್ಲ, ಕೋಮು ಭಾವನೆ ಕೆರಳಿಸುವುದೇ ಅವರ ಕೆಲಸ” ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, “ನಮಗೆ ಕೆಲಸವಿಲ್ಲ ನಿಜ, ಆದರೆ ಕೆಲಸವಿರುವ ನೀವು ಏನು ಮಾಡುತ್ತಿದ್ದೀರಿ? ಮಸಾಲೆ ದೋಸೆ ತಿನ್ನುತ್ತಿದ್ದೀರಾ? ಕಪ್‌ಗೆ ಮುತ್ತಿಡುವ ಕೆಲಸ ಮಾಡುತ್ತಿದ್ದೀರಾ?” ಎಂದು ವ್ಯಂಗ್ಯವಾಡಿದ್ದಾರೆ.
ಮದ್ದೂರಿನ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿರುವ ಅಶ್ವತ್ಥನಾರಾಯಣ, “ಕೆಲಸವಿರುವ ಸರ್ಕಾರದ ನಾಯಕರು, ಸಚಿವರು ಎಲ್ಲಿದ್ದೀರಿ? ಒಬ್ಬ ಸಚಿವ ಇಲ್ಲವೇ ಶಾಸಕನಾದರೂ ಮದ್ದೂರಿಗೆ ಬಂದು ಜನರ ಸಂಕಷ್ಟ ಆಲಿಸಿದ್ದೀರಾ? ಈ ಸರ್ಕಾರ ಸತ್ತುಹೋಗಿದೆಯಾ, ಬದುಕಿದೆಯಾ?” ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಜನರ ಬಹುಮತದಿಂದ ಆಯ್ಕೆಯಾದ ಸರ್ಕಾರವು ಜನರಿಗೆ ಗೌರವ ಕೊಡದೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕರು, ಸರ್ಕಾರವು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. “ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ಠಾಣೆ ಸುಡಲು ಹೋಗಿದ್ದವರ ಕೇಸ್‌ಗಳನ್ನು ವಾಪಸ್ ಪಡೆದಿದ್ದಾರೆ. ಇದು ನ್ಯಾಯ ಕೊಡುವ ಸರ್ಕಾರವೇ?” ಎಂದು ಅವರು ಪ್ರಶ್ನಿಸಿದ್ದಾರೆ. ಜನರಿಗೆ ರಕ್ಷಣೆ ಒದಗಿಸುವ ಬದಲು, ತಪ್ಪಿತಸ್ಥರಿಗೆ ರಕ್ಷಣೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಅಶ್ವತ್ಥನಾರಾಯಣ ಅವರು, “ನಾವೇನು ಪಾಕಿಸ್ತಾನದಲ್ಲಿದ್ದೇವೆಯಾ?” ಎಂದು ಕೇಳುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಜನರ ಪ್ರೀತಿಗಾದರೂ ಗೌರವ ಕೊಡಿ. ಚೆನ್ನಾಗಿ ಆಡಳಿತ ನಡೆಸಿ. ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಿ,” ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.





