ಬೀದರ್: ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕುದುರೆಯೊಂದು ಜಾಡಿಸಿ ಒದ್ದ ಪರಿಣಾಮ ಸಾವನ್ನಪ್ಪಿದ ದುರ್ಘಟನೆ ಬೀದರ್ ನಗರದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..
ಮೃತ ವ್ಯಕ್ತಿಯನ್ನು ಬೀದರ್‌ನ ಮೈಲೂರಿನ ಜಮ್ಮಿ ಕಾಲನಿ ನಿವಾಸಿ ವೈಜನಾಥ (60) ಎಂದು ಗುರುತಿಸಲಾಗಿದೆ. ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ವೈಜನಾಥ ಅವರು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ.
ವೈಜನಾಥ ಅವರು ಬೀದರ್ ಸಮೀಪದ ಚಿದ್ರಿ ಪ್ರದೇಶದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಸಂಜೆ ವೇಳೆ ಮೈಲೂರಿನತ್ತ ನಡೆದುಕೊಂಡು ಹೋಗುತ್ತಿದ್ದರು. ರಿಂಗ್ ರಸ್ತೆಯ ಮೂಲಕ ಮನೆಗೆ ತೆರಳುತ್ತಿದ್ದ ವೇಳೆ ಅಕಸ್ಮಿಕವಾಗಿ ಹಿಂದಿನಿಂದ ಬಂದ ಕುದುರೆಯೊಂದು ಜಾಡಿಸಿ ಅವರಿಗೆ ಬಲವಾಗಿ ಒದ್ದಿದೆ.
ಕುದುರೆಯ ಹೊಡೆತ ತುಂಬಾ ಬಲವಾಗಿದ್ದರಿಂದ ವೈಜನಾಥ ಅವರ ತಲೆಗೆ ಗಂಭೀರ ಗಾಯವಾಗಿದೆ. ಘಟನೆ ನಡೆದ ಕ್ಷಣದಲ್ಲೇ ಅವರು ನೆಲಕ್ಕೆ ಬಿದ್ದು ಅಸ್ವಸ್ಥರಾಗಿದ್ದಾರೆ. ಸ್ಥಳೀಯರು ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು.
ಗಂಭೀರವಾಗಿ ಗಾಯಗೊಂಡಿದ್ದ ವೈಜನಾಥ ಅವರನ್ನು ಕೂಡಲೇ ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ ಆಸ್ಪತ್ರೆಗೆ ಕಳುಹಿಸುವಂತೆ ಸಲಹೆ ನೀಡಿದರು.
ಆದರೆ ದುರಾದೃಷ್ಟವಶಾತ್, ಅವರನ್ನು ಆಂಬ್ಯುಲೆನ್ಸ್ ಮೂಲಕ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆವೇ ವೈಜನಾಥ ಅವರು ಕೊನೆಯುಸಿರೆಳೆದಿದ್ದಾರೆ.
ಟಿವಿಕೆ ಮುಖ್ಯಸ್ಥ ವಿಜಯ್ ಚುನಾವಣಾ ರ‍್ಯಾಲಿಯಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು
ಚೆನ್ನೈ/ಸೇಲಂ, ಫೆಬ್ರವರಿ 13: ತಮಿಳುನಾಡಿನ ಸೇಲಂ ನಗರದಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಭಾರೀ ಸಾರ್ವಜನಿಕ ರ್ಯಾಲಿ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ರ್ಯಾಲಿಯನ್ನು ನಟ ಹಾಗೂ ಪಕ್ಷದ ಮುಖ್ಯಸ್ಥ ವಿಜಯ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಭಾರೀ ಬಿಸಿಲು ಮತ್ತು ಅಪಾರ ಜನಸಂದಣಿಯ ನಡುವೆ 37 ವರ್ಷದ ವ್ಯಕ್ತಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಬಳಿಕ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರಿಶೀಲಿಸಿದ ನಂತರ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ ತಾಪಾಘಾತ (ಹೀಟ್‌ಸ್ಟ್ರೋಕ್) ಅಥವಾ ಹೃದಯಾಘಾತ ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ಸೂರಜ್ ಎಂದು ಗುರುತಿಸಲಾಗಿದೆ. ಅವರು ಮೂಲತಃ ಮಹಾರಾಷ್ಟ್ರದವರಾಗಿದ್ದು, ಸೇಲಂನ ಸೆಪ್ಪೆಪೆಟ್ಟೆ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಬೆಳ್ಳಿ ಸಂಬಂಧಿತ ಕಾರ್ಮಿಕ ಕೆಲಸದಲ್ಲಿ ತೊಡಗಿದ್ದ ಅವರು ವಿವಾಹಿತರಾಗಿದ್ದು, ಪತ್ನಿ ಹಾಗೂ ಮಗು ಅವರನ್ನು ಅಗಲಿದ್ದಾರೆ.
ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಬಿಸಿಲಿನ ನಡುವೆಯೂ ಜನರು ದೀರ್ಘಕಾಲ ನಿಂತಿದ್ದರಿಂದ ಹಲವರು ಅಸ್ವಸ್ಥರಾಗಿರುವ ಮಾಹಿತಿ ಲಭ್ಯವಾಗಿದೆ. ಕೆಲವರಿಗೆ ತಲೆ ಸುತ್ತು, ವಾಂತಿ, ದೇಹದ ಉಷ್ಣಾಂಶ ಏರಿಕೆ ಮುಂತಾದ ಸಮಸ್ಯೆಗಳು ಕಂಡುಬಂದಿವೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಕರೂರಿನಲ್ಲಿ ವಿಜಯ್ ನಡೆಸಿದ ಮತ್ತೊಂದು ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದರು. ಆ ಘಟನೆ ನಂತರವೂ ಜನಸಮೂಹ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಇದೀಗ ಮತ್ತೆ ಸಂಭವಿಸಿರುವ ಸಾವು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಪೊಲೀಸರು ತನಿಖೆ
ಘಟನೆಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಿಖರ ಸಾವಿನ ಕಾರಣ ತಿಳಿಯಲು ವರದಿ ನಿರೀಕ್ಷಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕವೇ ತಾಪಾಘಾತವೇ ಅಥವಾ ಹೃದಯಾಘಾತವೇ ಅಂತಿಮ ಕಾರಣ ಎಂದು ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





