ಬೀದರ್: ರಸ್ತೆ ಪಕ್ಕದ ಸೇತುವೆಗೆ ಬೈಕ್ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ..ಈ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯಲ್ಲಿ ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಸಮೀಪದ ನಾಗಣ್ಣ ಕ್ರಾಸ್ ಬಳಿ ನಡೆದಿದೆ.
ದುರಂತದಲ್ಲಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ವೆಂಕಟ್ ಕರಟ್ಮಲ್ (40), ಅವರ ಪತ್ನಿ ಶಿಲ್ಪಾ (35) ಹಾಗೂ ಮಗಳು ರಕ್ಷಿತಾ (12) ಮೃತಪಟ್ಟಿದ್ದಾರೆ. ಇವರ ಪುತ್ರ ದಿಗಂಬರ್ (15) ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆ್ಯಂಬುಲೆನ್ಸ್ ಮೂಲಕ ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ದಿಗಂಬರ್‌ನ ತಲೆಗೆ ತೀವ್ರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ವೆಂಕಟ್ ಕರಟ್ಮಲ್ ಅವರು ತಮ್ಮ ಕುಟುಂಬದೊಂದಿಗೆ ಬೀದರ್‌ಗೆ ಬಂದಿದ್ದರು. ಬೀದರ್‌ನಲ್ಲಿ ವಾಸವಿದ್ದ ತಮ್ಮ ಸೋದರ ಅಳಿಯನ ಮಗಳನ್ನು ಮಾತನಾಡಿಸಿ, ನಂತರ ಕುಟುಂಬ ಸಮೇತ ರಾಜೇಶ್ವರ ಗ್ರಾಮಕ್ಕೆ ವಾಪಸ್ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.
ರಾತ್ರಿ ವೇಳೆ ನಾಗಣ್ಣ ಕ್ರಾಸ್ ಬಳಿ ವೇಗವಾಗಿ ಸಾಗುತ್ತಿದ್ದ ಬೈಕ್, ರಸ್ತೆ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಯಿಂದ ವೆಂಕಟ್, ಶಿಲ್ಪಾ ಹಾಗೂ ರಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಿಗಂಬರ್ ಗಂಭೀರ ಸ್ಥಿತಿಯಲ್ಲಿ ರಸ್ತೆ ಮೇಲೆ ಬಿದ್ದಿದ್ದು, ಸ್ಥಳೀಯರು ತಕ್ಷಣ ಪೊಲೀಸರಿಗೆ ಹಾಗೂ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ.
ಮೃತದೇಹಗಳನ್ನು ಹಳ್ಳಿಖೇಡ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗಿದೆ. ನಂತರ ಮರಣೋತ್ತರ ಪರೀಕ್ಷೆಗಾಗಿ ವ್ಯವಸ್ಥೆ ಮಾಡಲಾಗಿದೆ. ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ಧಾವಿಸಿದ್ದು, ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.





