ಶಿವಮೊಗ್ಗ: ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಕಿರುಕುಳ ನೀಡಿದ ಆರೋಪದ ಹಿನ್ನೆಲೆ, ಮನನೊಂದು ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರೋಪಿ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.
ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.ಸ್ವಾತಿ (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಹಿಳೆಯ ಪತಿ ಜಗದೀಶ್ ವಾರದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಈಗಾಗಲೇ ಕುಟುಂಬ ಸಂಕಷ್ಟದಲ್ಲಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸನಿಂದಲೇ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೃತ ಮಹಿಳೆಯ ತಾಯಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪದ ಪ್ರಕಾರ, ಮೋಹನ್ ಫೇಸ್‌ಬುಕ್ ಹಾಗೂ ಮೆಸೇಂಜರ್ ಮೂಲಕ ನಿರಂತರವಾಗಿ ಸಂದೇಶ ಕಳುಹಿಸಿ ಮಹಿಳೆಗೆ ಕಿರುಕುಳ ನೀಡುತ್ತಿದ್ದನು. ಮಹಿಳೆ ಆತನ ಖಾತೆಯನ್ನು ಬ್ಲಾಕ್ ಮಾಡಿದರೂ, ಬೇರೆ ಖಾತೆಗಳಿಂದ ಸಂಪರ್ಕಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಮಹಿಳೆಗೆ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಹಿಳೆ ಆತ್ಮಹತ್ಯೆಗೂ ಮುನ್ನ ವಾಟ್ಸಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಮೋಹನ್ ಹೆಸರನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. “ಅಮ್ಮ, ನನ್ನ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಜನರ ಬಳಿ ಹೇಳಿದ್ದಾನೆ. ಈಗಾಗಲೇ ಪತಿಯನ್ನು ಕಳೆದುಕೊಂಡಿದ್ದೇನೆ. ಇದರಿಂದ ತುಂಬಾ ಮನನೊಂದಿದ್ದೇನೆ. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಆಕೆ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಮಹಿಳೆ ಹಾಗೂ ಜಗದೀಶ್ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಈಗ ಅವರು ಅನಾಥರಾಗಿದ್ದಾರೆ.
ಆರೋಪಿ ಮೋಹನ್ ಈ ಹಿಂದೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಶಿಸ್ತು ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆಗೆ ವರ್ಗಾವಣೆಯಾಗಿದ್ದನೆಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೂ ಹಲವು ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳೂ ಹೊರಬಿದ್ದಿವೆ. ಜೊತೆಗೆ ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದನೆಂಬ ದೂರುಗಳೂ ಕೇಳಿಬಂದಿವೆ.
ಪ್ರಕರಣದ ಗಂಭೀರತೆಯನ್ನು ಮನಗಂಡು ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಸೂಚನೆ ನೀಡಿದ್ದಾರೆ. ಆರೋಪಿ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





