ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆಮಾಡಿದೆ. ರಜಾ ದಿನಗಳ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾಲ್‌ಗಳತ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹೀಗಾಗಿ ನಗರದ ಟ್ರಾಫಿಕ್ ದಟ್ಟಣೆ ತಪ್ಪಿಸಲು ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಸಂಚಾರ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಇಂದಿನಿಂದ ಅಂದರೆ ದಿನಾಂಕ 24.12.2025 ರಿಂದ 28.12.2025 ರವರೆಗೆ ಅನ್ವಯವಾಗುವಂತೆ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಫಿನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಮಾಲ್‌ಗಳ ಸುತ್ತಮುತ್ತ ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ.
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು
ಸಂಚಾರ ದಟ್ಟಣೆ ನಿಯಂತ್ರಿಸಲು ಕೆಳಗಿನ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:
-
ಐಟಿಪಿಎಲ್ ರಸ್ತೆ: ಬಿ. ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್‌ನಿಂದ ಗರುಡಚಾರ್ ಪಾಳ್ಯ ಡೆಕಾಥ್ಲಾನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
-
ಐಟಿಪಿಎಲ್ ಮುಖ್ಯರಸ್ತೆ: ಮೆಡಿಕವರ್ ಆಸ್ಪತ್ರೆಯಿಂದ ಬಿಗ್ ಬಜಾರ್ ಜಂಕ್ಷನ್ ವರೆಗೂ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ.
ಓಲಾ, ಉಬರ್ ಮತ್ತು ಆಟೋಗಳಿಗಾಗಿ ಪಿಕ್ ಅಪ್/ಡ್ರಾಪ್ ಪಾಯಿಂಟ್
ಮಾಲ್‌ಗಳಿಗೆ ಬರುವವರಿಗೆ ಅನುಕೂಲವಾಗುವಂತೆ ಹಾಗೂ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು ಪ್ರತ್ಯೇಕ ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ:
-
ಫಿನಿಕ್ಸ್ ಮಾಲ್‌ಗೆ: ಐಟಿಪಿಎಲ್ ಮುಖ್ಯ ರಸ್ತೆಯ ಬೆಸ್ಕಾಂ ಕಛೇರಿ ಬಳಿ ‘ಡ್ರಾಪ್ ಆಫ್’ ಮತ್ತು ಲೋರಿ ಜಂಕ್ಷನ್ ಬಳಿ ‘ಪಿಕ್ ಅಪ್’ ಪಾಯಿಂಟ್ ಮಾಡಲಾಗಿದೆ.
-
ನೆಕ್ಸಸ್ ಶಾಂತಿನಿಕೇತನ್ ಮಾಲ್‌ಗೆ: ರಾಜಪಾಳ್ಯ ಬಳಿ ‘ಡ್ರಾಪ್ ಆಫ್’ ಮತ್ತು ಆಸ್ಟರ್ ಆಸ್ಪತ್ರೆ ಬಳಿ ‘ಪಿಕ್ ಅಪ್’ ಮಾಡಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗಗಳು
ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮಾಲ್‌ಗೆ ಭೇಟಿ ನೀಡುವವರು ಈ ಮಾರ್ಗಗಳನ್ನು ಅನುಸರಿಸಲು ಪೊಲೀಸರು ವಿನಂತಿಸಿದ್ದಾರೆ:
-
ಹೂಡಿ ಕಡೆಯಿಂದ ಬರುವವರಿಗೆ: ಫಿನಿಕ್ಸ್ ಮಾಲ್‌ಗೆ ಬರುವ ವಾಹನಗಳು ಕಡ್ಡಾಯವಾಗಿ ಕಾಮಧೇನು ನಗರ ಬಳಿ ಯು-ಟರ್ನ್ (U-Turn) ಪಡೆದು ಶೆಲ್ ಪೆಟ್ರೋಲ್ ಬಂಕ್ ಬಳಿ ಎಡ ತಿರುವು ಪಡೆಯಬೇಕು. ನಂತರ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿ ಮಾಲ್‌ನ ಹಿಂಭಾಗದ ಗೇಟ್ ಮೂಲಕ ಪ್ರವೇಶಿಸಬೇಕು.
-
ಕೆ.ಆರ್.ಪುರ ಕಡೆಯಿಂದ ಬರುವವರಿಗೆ: ಶೆಲ್ ಪೆಟ್ರೋಲ್ ಬಂಕ್ ಬಳಿ ಎಡ ತಿರುವು ಪಡೆದು ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿ ಹಿಂಭಾಗದ ಗೇಟ್ ಮೂಲಕ ಮಾಲ್ ಪ್ರವೇಶಿಸಲು ಸೂಚಿಸಲಾಗಿದೆ.
ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.





