ಬೆಂಗಳೂರು: ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿ, ತನ್ನ ದಟ್ಟಣೆಯ ಸಂಚಾರಕ್ಕೆ ಹೆಸರಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಸರ್ಕಾರವು ಹೊಸ ಯೋಜನೆಯೊಂದಿಗೆ ಮುಂದೆ ಬಂದಿದೆ. ಇನ್ಮುಂದೆ ಕಾರಿನಲ್ಲಿ ಒಬ್ಬರೇ ಪ್ರಯಾಣಿಸಿದರೆ, ಅಂತವರಿಗೆ “ಕಂಜೆಸ್ಟನ್ ಟಾಕ್ಸ್” ಅಥವಾ ದಟ್ಟಣೆ ತೆರಿಗೆ ವಿಧಿಸುವ ಚಿಂತನೆಯನ್ನು ಸರ್ಕಾರ ನಡೆಸಿದೆ. ಈ ಯೋಜನೆಯ ಮೂಲಕ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಆದಾಯವನ್ನೂ ಗಳಿಸುವ ಗುರಿಯನ್ನು ಇರಿಸಲಾಗಿದೆ.
ಬೆಂಗಳೂರಿನ ಔಟರ್ ರಿಂಗ್ ರಸ್ತೆ, ಟೆಕ್ ಕಾರಿಡಾರ್ ಎಂದೇ ಖ್ಯಾತವಾಗಿದ್ದು, ಇಲ್ಲಿ ದಿನನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಅತ್ಯಂತ ತೀವ್ರವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರವು ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ರಸ್ತೆಯಲ್ಲಿ ಒಬ್ಬರೇ ಕಾರಿನಲ್ಲಿ ಸಂಚರಿಸಿದರೆ, ಫಾಸ್ಟ್‌ಟ್ಯಾಗ್ ಮೂಲಕ ತೆರಿಗೆಯನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಆದರೆ, ಒಂದು ಕಾರಿನಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಪ್ರಯಾಣಿಸಿದರೆ ಯಾವುದೇ ದಂಡವಿರುವುದಿಲ್ಲ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಈ ಯೋಜನೆಯ ಕುರಿತು ಸಭೆ ನಡೆದಿದ್ದು, ಇದರ ಸಾಧಕ-ಬಾಧಕಗಳನ್ನು ಚರ್ಚಿಸಲಾಗಿದೆ. ಶಾಲಿನಿ ರಜನೀಶ್ ಅವರು ಈ ಯೋಜನೆಯನ್ನು ಸರಳವಾಗಿ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ. “ಈ ಯೋಜನೆಯಿಂದ ರಸ್ತೆಯ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಕಾರುಪೂಲಿಂಗ್‌ಗೆ ಜನರನ್ನು ಪ್ರೇರೇಪಿಸಬಹುದು,” ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಈ ಯೋಜನೆ ಔಟರ್ ರಿಂಗ್ ರಸ್ತೆಯಲ್ಲಿ ಯಶಸ್ವಿಯಾದರೆ, ನಗರದ ಇತರ ದಟ್ಟಣೆಯ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆಯಿದೆ.