ಬೆಂಗಳೂರು, ಅಕ್ಟೋಬರ್ 29: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಯೆಲ್ಲೋ ಲೈನ್ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಆರ್.ವಿ ರೋಡ್‌ನಿಂದ ಬೊಮ್ಮಸಂದ್ರದವರೆಗಿನ ಯೆಲ್ಲೋ ಲೈನ್ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ರೈಲು ಸಂಚಾರ ಆರಂಭಿಸಲಿದೆ. ಈ ಸಂಚಾರದಿಂದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದ್ದು, ರೈಲುಗಳ ನಡುವಿನ ಅಂತರ 19 ನಿಮಿಷಗಳಿಂದ 15 ನಿಮಿಷಗಳಿಗೆ ಇಳಿಯಲಿದೆ. ಈಗಾಗಲೇ ಐದನೇ ರೈಲಿನ ಸುರಕ್ಷತಾ ಪರೀಕ್ಷೆಗಳು ಪೂರ್ಣಗೊಂಡಿದ್ದು, ಅಂತಿಮ ತಾಂತ್ರಿಕ ಪರೀಕ್ಷೆಗಳು ನಡೆಯುತ್ತಿವೆ. ನವೆಂಬರ್ 1ರಿಂದ ಈ ರೈಲು ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಯೆಲ್ಲೋ ಲೈನ್ ಮೆಟ್ರೋ ಮಾರ್ಗವು ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿತ್ತು. ಆರಂಭದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಪ್ರಾರಂಭವಾಗಿತ್ತು, ಆಗ ಪ್ರತಿ 25 ನಿಮಿಷಕ್ಕೊಮ್ಮೆ ರೈಲು ಲಭ್ಯವಿತ್ತು. ಸೆಪ್ಟಂಬರ್ 10ರಂದು ನಾಲ್ಕನೇ ರೈಲು ಸೇರ್ಪಡೆಯಾದಾಗ, ಸಂಚಾರದ ಅಂತರ 19 ನಿಮಿಷಗಳಿಗೆ ಇಳಿದಿತ್ತು. ಈಗ ಐದನೇ ರೈಲಿನ ಸೇರ್ಪಡೆಯಿಂದ ಯೆಲ್ಲೋ ಲೈನ್‌ನ ಸಂಚಾರ ಗಣನೀಯವಾಗಿ ಹೆಚ್ಚಲಿದೆ. ಈ ಹೊಸ ರೈಲು ಪ್ರತಿ 15 ನಿಮಿಷಕ್ಕೊಮ್ಮೆ ಸಂಚಾರ ಮಾಡಲಿದ್ದು, ಪ್ರಯಾಣಿಕರಿಗೆ ಕಾಯುವಿಕೆಯ ಸಮಯ ಕಡಿಮೆಯಾಗಲಿದೆ.
ಈ ಸಂತಸದ ಸುದ್ದಿಯ ಜೊತೆಗೆ, ಯೆಲ್ಲೋ ಲೈನ್ ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಿಸುವ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಡೆತಡೆ ಎದುರಾಗಿದೆ. ಕನ್ನಡಿಗರ ವ್ಯಾಪಕ ವಿರೋಧದ ನಡುವೆ, ಬಿಎಂಆರ್‌ಸಿಎಲ್ ಈ ಯೋಜನೆ ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಬೆಂಗಳೂರು ಮೆಟ್ರೋ ಮತ್ತು ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ (ಸಿಎಂಆರ್‌ಎಲ್) ವಿಭಿನ್ನ ವಿದ್ಯುತ್ ಶಕ್ತಿ ಚಾಲಿತ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ಎರಡೂ ವ್ಯವಸ್ಥೆಗಳನ್ನು ಸಂಯೋಜಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬೊಮ್ಮಸಂದ್ರದಿಂದ ತಮಿಳುನಾಡಿನ ಅತ್ತಿಬೆಲೆಗೆ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ, ಎರಡೂ ರಾಜ್ಯಗಳ ಗಡಿಯಲ್ಲಿ 300 ಮೀಟರ್ ಅಂತರದಲ್ಲಿ ಎರಡು ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ. ಈ ಅಂತರವನ್ನು ಪಾದಚಾರಿ ಮೇಲ್ಸೇತುವೆಯ ಮೂಲಕ ದಾಟಬೇಕು, ಇದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. “ನಾವು ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ,” ಎಂದು ಬಿಎಂಆರ್‌ಸಿಎಲ್‌ನ ಒಬ್ಬ ಅಧಿಕಾರಿ ಹೇಳಿದ್ದಾರೆ.





