ಬೆಂಗಳೂರು: ನಗರದಲ್ಲಿ ಮತ್ತೊಂದು ಶಾಕಿಂಗ್ ಕಿಡ್ನಾಪ್ ಕೇಸ್ ಬೆಳಕಿಗೆ ಬಂದಿದೆ. ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನು ಅಪಹರಿಸಿ, ಹಣಕ್ಕಾಗಿ ಒತ್ತಾಯಿಸಿದ್ದ ಗ್ಯಾಂಗ್ ಅನ್ನು ಕೋರಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಛಲಪತಿ (ಹೆಡ್ ಕಾನ್ಸ್‌ಟೇಬಲ್), ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ ಒಟ್ಟು ಎಂಟು ಮಂದಿ ಸೇರಿದ್ದಾರೆ.
ಘಟನೆಯ ಹಿನ್ನೆಲೆ
ಕಳೆದ ರಾತ್ರಿ ಕಾಲ್ ಸೆಂಟರ್ ಶಿಫ್ಟ್ ಮುಗಿಸಿ ಮನೆಗೆ ತೆರಳುತ್ತಿದ್ದ ನಾಲ್ವರು ಉದ್ಯೋಗಿಗಳನ್ನು ಆರೋಪಿಗಳ ಗ್ಯಾಂಗ್ ಬಲವಂತವಾಗಿ ತಮ್ಮ ವಾಹನಕ್ಕೆ ಎಳೆದೊಯ್ದು ಕಿಡ್ನಾಪ್ ಮಾಡಿದೆ. ಬಳಿಕ ಅವರ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಕಂಪನಿಯ ಮ್ಯಾನೇಜರ್‌ಗೆ ದಿಢೀರ್ ಫೋನ್ ಮಾಡಿ “ನಿನ್ನ ನಾಲ್ವರು ಸಿಬ್ಬಂದಿ ನಮ್ಮ ಬಳಿ ಇದ್ದಾರೆ. 18 ಲಕ್ಷ ರೂಪಾಯಿ ತಕ್ಷಣ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದಾರೆ. ತಕ್ಷಣ ಮ್ಯಾನೇಜರ್, ಕಂಪನಿಯ ಖಾತೆಯಿಂದ 18 ಲಕ್ಷ ರೂಪಾಯಿಯನ್ನು ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗೆ ಆನ್‌ಲೈನ್‌ನಲ್ಲಿ ವರ್ಗಾಯಿಸಿದ್ದಾರೆ.
ಅಲ್ಲದೇ, ಕಿಡ್ನಾಪ್ ಆದ ಉದ್ಯೋಗಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಒಂದು ಲಾಡ್ಜ್‌ಗೆ ಕರೆದೊಯ್ದು ಕಟ್ಟಿ ಹಾಕಿ ಇರಿಸಿದ್ದರು. ಮರುದಿನ ಬೆಳಗ್ಗೆ ಬಿಪಿಒ ಕಂಪನಿಯ ಸಿಬ್ಬಂದಿಗಳು ಬೆಳಿಗ್ಗೆ ಕೆಲಸಕ್ಕೆ ಬಂದಾಗ ತಮ್ಮ ಸಹೋದ್ಯೋಗಿಗಳು ಕಾಣೆಯಾಗಿರುವುದನ್ನು ಗಮನಿಸಿ ತಕ್ಷಣ ಕೋರಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ವಿಶೇಷ ತಂಡ ರಚಿಸಿ ಮಾಹಿತಿ ಸಂಗ್ರಹಣೆ, ಮೊಬೈಲ್ ಟ್ರ್ಯಾಕಿಂಗ್, ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
ಕೋರಮಂಗಲ ಪೊಲೀಸರು ನಿಖರವಾದ ಆಪರೇಶನ್ ನಡೆಸಿ, ಆರೋಪಿಗಳು ಇದ್ದ ಲಾಡ್ಜ್‌ಗೆ ದಾಳಿ ಮಾಡಿ ನಾಲ್ವರು ಯುವಕರನ್ನು ರಕ್ಷಿಸಿದ್ದು, ಛಲಪತಿ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಪವನ್, ಪ್ರಸನ್ನ, ಅತೀಕ್, ಜಬೀಹುಲ್ಲಾ ಸೇರಿದಂತೆ ಗ್ಯಾಂಗ್‌ನ ಪ್ರಮುಖ ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ.





