ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ದಿಢೀರ್ ಮಳೆ ಆರಂಭವಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ದಿನವಿಡೀ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಸಂಜೆ ವೇಳೆಗೆ ಸುರಿದ ಮಳೆ ಕೊಂಚ ನೆಮ್ಮದಿ ನೀಡಿದರೆ, ಮತ್ತೊಂದೆಡೆ ಏಕಾಏಕಿ ಮಳೆ ಸುರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ನಗರದ ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ, ಮಾದಾವರ, ಮಹದೇವಪುರ, ಕೆಆರ್ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಂಡುಬಂದಿದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಕೆಲವೆಡೆ ತುಂತುರು ಮಳೆಯೊಂದಿಗೆ ಆರಂಭವಾದ ಮಳೆ ಬಳಿಕ ಧಾರಾಕಾರವಾಗಿ ಸುರಿದಿದೆ.
ಮುಂಜಾನೆಯಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಬಿಸಿಲಿನ ಬೇಗೆಯಿಂದ ಜನರು ಕಂಗಾಲಾಗಿದ್ದ ಸಂದರ್ಭದಲ್ಲೇ ಸಂಜೆ ವೇಳೆಗೆ ಮೋಡ ಕವಿದು ಮಳೆ ಆರಂಭವಾಗಿದೆ. ಮಳೆಯ ಸಿಂಚನದಿಂದ ವಾತಾವರಣದಲ್ಲಿ ತಂಪು ಆವರಿಸಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.
ಮಲ್ಲೇಶ್ವರಂ ಹಾಗೂ ರಾಜಾಜಿನಗರ ಭಾಗಗಳಲ್ಲಿ ಮಳೆ ಹೆಚ್ಚಾಗಿದ್ದರೆ, ಪೀಣ್ಯ ಮತ್ತು ಮಾದಾವರ ಸುತ್ತಮುತ್ತಲ ಪ್ರದೇಶಗಳಲ್ಲೂ ವರುಣನ ಅಬ್ಬರ ಕಂಡುಬಂದಿದೆ. ಮಹದೇವಪುರ ಭಾಗದಲ್ಲಿಯೂ ಮಳೆಯಾಗಿದ್ದು, ಪ್ರಮುಖ ರಸ್ತೆಗಳ ಮೇಲೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಇನ್ನು ನಗರದ ಕೇಂದ್ರ ಭಾಗದಲ್ಲೂ ಮಳೆ ತನ್ನ ಅಬ್ಬರ ತೋರಿಸಿದೆ. ಕೆಆರ್ ಸರ್ಕಲ್, ಕಲಾಸಿಪಾಳ್ಯ, ಕಾರ್ಪೊರೇಷನ್, ವಿಧಾನಸೌಧ ಹಾಗೂ ಲಾಲ್‌ಬಾಗ್ ಸುತ್ತಮುತ್ತ ಮಳೆ ಆರಂಭವಾಗಿದೆ. ಜಯನಗರ ಮತ್ತು ಶಾಂತಿನಗರ ಭಾಗಗಳಲ್ಲೂ ಮಳೆಯ ಸಿಂಚನ ಕಂಡುಬಂದಿದೆ.
ದಿಢೀರ್ ಮಳೆ ಆರಂಭವಾದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿದ್ದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು. ಯಾವುದೇ ಮುನ್ಸೂಚನೆ ಇಲ್ಲದೆ ಮಳೆ ಸುರಿದ ಕಾರಣ ಅನೇಕ ಬೈಕ್ ಸವಾರರು ರಸ್ತೆ ಬದಿಯಲ್ಲಿ ನಿಲ್ಲಿಸಿ ಮಳೆ ಕಡಿಮೆಯಾಗುವುದನ್ನು ಕಾಯುವಂತಾಯಿತು.
ಸಂಜೆಯ ವೇಳೆಗೆ ಕಚೇರಿ ಹಾಗೂ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದವರಿಗೂ ಮಳೆ ತೊಂದರೆ ಉಂಟುಮಾಡಿತು. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವ ಸಮಯದಲ್ಲೇ ಮಳೆ ಸುರಿದ ಹಿನ್ನೆಲೆ ಸಂಚಾರದ ವೇಗ ನಿಧಾನಗೊಳ್ಳುವ ಸಾಧ್ಯತೆ ಎದುರಾಗಿದೆ. ಮಳೆ ಆರಂಭವಾದ ಹಿನ್ನೆಲೆ ವಾಹನ ಸವಾರರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.





