ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಉಂಟಾಗುವ ದುರಂತಗಳು ದಿನೇ ದಿನೇ ಹೆಚ್ಚುತ್ತಿವೆ. ಇದೀಗ ನಗರದ ಕುಂದಲಹಳ್ಳಿ ಪ್ರದೇಶದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಕುಂದಲಹಳ್ಳಿ ಬಳಿ ‘ಸೆವೆನ್ ಹಿಲ್ಸ್ ಕೋ-ಲಿವಿಂಗ್’ ಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭೀಕರ ಸ್ಪೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬಳ್ಳಾರಿ ಮೂಲದ ಅರವಿಂದ್ ಎಂಬ ಯುವಕ ಸಾವನ್ನಪ್ಪಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ಪಿಜಿಯ ಕೆಳಮಹಡಿಯಲ್ಲಿ ಇರುವ ಕಿಚನ್ ಸ್ಟೋರ್‌ನಲ್ಲಿ ನಡೆದಿದೆ ಎನ್ನಲಾಗಿದೆ. ದಿನನಿತ್ಯದ ಅಡುಗೆ ಕಾರ್ಯಕ್ಕಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್‌ನಲ್ಲಿ ಏಕಾಏಕಿ ಸೋರಿಕೆಯಾಗಿ, ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದಿಂದ ಕಿಚನ್ ಸಂಪೂರ್ಣವಾಗಿ ಹಾನಿಯಾಗಿದೆ.
ಸಿಲಿಂಡರ್ ಸ್ಪೋಟದ ವೇಳೆ ಅರವಿಂದ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರವಿಂದ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇನ್ನೂ ಮೂವರು ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಅರವಿಂದ್ ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಕೆಲಕಾಲ ಪಿಜಿಯಲ್ಲಿದ್ದವರನ್ನು ಹೊರಗೆ ಕರೆತರುವಲ್ಲಿ ಸಿಬ್ಬಂದಿಗೆ ಹರಸಾಹಸ ಪಡಬೇಕಾಯಿತು.
ಘಟನೆಯ ಮಾಹಿತಿ ಪಡೆದ ಹೆಚ್‌ಎಎಲ್ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.
https://youtu.be/RVPiOVmmF3A?si=LgZUW8qdOMPPol2i
ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಉದ್ಘಾಟನೆಗೂ ಮುನ್ನವೇ ಕಾಫಿ ಶಾಪ್ ಬ್ಲಾಸ್ಟ್
ಬೆಂಗಳೂರು ಉತ್ತರ ತಾಲೂಕಿನ ಅಚ್ಯುತನಗರದಲ್ಲಿ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಭೀಕರ ಅಗ್ನಿ ದುರಂತವೊಂದು ನಡೆದಿದೆ. ಉದ್ಘಾಟನೆಗೆ ಸಿದ್ಧವಾಗಿದ್ದ ಕಾಫಿ ಶಾಪ್ ಸುಟ್ಟು ಭಸ್ಮವಾಗಿಸಿದೆ. ಕಾಫಿ ಆಂಡ್ ಕೋ ಹೆಸರಿನ ಈ ಕಾಫಿ ಶಾಪ್ ಅನ್ನು ಭುವದಾಸ್ ಅವರು ಪ್ರಾರಂಭಿಸಲು ಸಜ್ಜಾಗಿದ್ದರು, ಸುಜಯ್ ಎಂಬುವರ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ದುರಂತದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಒಂದೇ ಸಮಾಧಾನ.
ದುರಂತದ ದಿನದಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ, ಕಾಫಿ ಶಾಪ್‌ಗೆ ಭಾರತ್ ಫ್ಯೂಲ್ ಏಜೆನ್ಸಿಯಿಂದ ಎರಡು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಲಾಗಿತ್ತು. ಖರೀದಿಯಾದ ಒಂದು ಗಂಟೆಯೊಳಗೆ, ಗ್ಯಾಸ್ ಸೋರಿಕೆಯಿಂದ ಸಿಲಿಂಡರ್‌ನಲ್ಲಿ ಬ್ಲಾಸ್ಟ್ ಸಂಭವಿಸಿದ್ದು, ಕಾಫಿ ಶಾಪ್ ಧಗಧಗನೆ ಹೊತ್ತಿ ಉರಿಯಿತು. ಈ ಘಟನೆಯಿಂದ ಕಾಫಿ ಶಾಪ್‌ನ ಒಳಗಿದ್ದವರು ಪವಾಡ ದೃಶ ರೀತಿಯಲ್ಲಿ ಪಾರಾಗಿದ್ದಾರೆ. ಆದರೆ, ಶಾಪ್‌ನ ಎಲ್ಲಾ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಕಾಫಿ ಶಾಪ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಆಕರ್ಷಿಸುವ ಉದ್ದೇಶದಿಂದ ಕಾಫಿ ಆಂಡ್ ಕೋ ಶಾಪ್‌ನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿತ್ತು. ಸಂಜೆಯ ವೇಳೆಗೆ ಶಾಪ್‌ನ ಉದ್ಘಾಟನೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ, ಬೆಳಿಗ್ಗೆ ನಡೆದ ಈ ದುರಂತವು ಎಲ್ಲ ಯೋಜನೆಗಳನ್ನು ಧ್ವಂಸಗೊಳಿಸಿತು.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಭಾರತ್ ಫ್ಯೂಲ್ ಏಜೆನ್ಸಿಯ ವಿರುದ್ಧ ಕಳಪೆ ಗುಣಮಟ್ಟದ ಸಿಲಿಂಡರ್ ಪೂರೈಕೆ ಮಾಡಿದ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಘಟನೆಯ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ.
ಕಾಫಿ ಶಾಪ್‌ನ ಪಕ್ಕದಲ್ಲೇ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಇದ್ದು, ಘಟನೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಂಭವಿಸಿದ್ದರೆ, ಗಂಭೀರ ಸಾವು-ನೋವುಗಳು ಉಂಟಾಗುವ ಸಾಧ್ಯತೆಯಿತ್ತು. ಆದರೆ, ತಕ್ಷಣದ ಕ್ರಮದಿಂದ ಒಳಗಿದ್ದವರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ಘಟನೆಯು ಗ್ಯಾಸ್ ಸಿಲಿಂಡರ್‌ಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಈ ಘಟನೆಯು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ. ವ್ಯಾಪಾರಿಗಳು ಮತ್ತು ಏಜೆನ್ಸಿಗಳು ಸಿಲಿಂಡರ್‌ಗಳನ್ನು ಪೂರೈಸುವ ಮೊದಲು ಕಟ್ಟುನಿಟ್ಟಾದ ಗುಣಮಟ್ಟ ತಪಾಸಣೆ ನಡೆಸಬೇಕು ಎಂಬ ಕರೆ ಜೋರಾಗಿದೆ.





